ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವುದರ ಜೊತೆಗೆ ಕಬ್ಬಿನ ತೂಕ, ರಿಕವರಿ, ಕಟಾವು ಅವಧಿ ಹಾಗೂ ಪಾವತಿ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವರಾದ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಕಬ್ಬಿನ ಬೆಲೆ, ಎಫ್ಆರ್ಪಿ, ಸಕ್ಕರೆ ಬೆಲೆ, ಕಬ್ಬಿನ ರಿಕವರಿ, ತೂಕದಲ್ಲಿನ ವ್ಯತ್ಯಾಸ, ಕಟಾವು ಅವಧಿ, ವೇಸ್ಟೇಜ್ ಹಾಗೂ ರೈತರ ಪಾವತಿ ಸೇರಿದಂತೆ ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆದಿರುವ ಕುರಿತು ಸುದ್ದಿಗಾರರಿಗೆ ಸಚಿವ ಲಮಾಣಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಮುಂದುವರಿದ ಕ್ರಮವಾಗಿ ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳ ಕಟಾವು ಅವಧಿ ಹಾಗೂ ಸಕ್ಕರೆ ರಿಕವರಿ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಕೇಂದ್ರ ಸರ್ಕಾರ ರಚಿಸಲಿರುವ ಜಂಟಿ ಸಮಿತಿಗೆ ರಾಜ್ಯದ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಕಬ್ಬನ್ನು ಯಾವ ಹಂತದಲ್ಲಿ ಕಟಾವು ಮಾಡಿದರೆ ರೈತರಿಗೆ ಗರಿಷ್ಠ ತೂಕ ಮತ್ತು ಉತ್ತಮ ರಿಕವರಿ ದೊರೆಯುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸುವ ಅಗತ್ಯವಿದೆ. ರೈತರ ಆದಾಯಕ್ಕೆ ಹಾನಿಯಾಗುವ ರೀತಿಯಲ್ಲಿ ಕಟಾವು ನಡೆಯಬಾರದು. ಕರ್ನಾಟಕದ ವಿವಿಧ ಕಬ್ಬು ಪ್ರದೇಶಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ರಾಜ್ಯದ ಅಭಿಪ್ರಾಯವನ್ನು ಕೇಂದ್ರದ ಜಂಟಿ ಸಮಿತಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ತೂಕದ ಬಗ್ಗೆ ರೈತರಿಗೆ ಸಂಪೂರ್ಣ ವಿಶ್ವಾಸ ಮೂಡಿಸಬೇಕು
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ರೈತರ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೈತರಿಗೆ ತಮ್ಮ ಕಬ್ಬಿನ ನಿಖರ ತೂಕದ ಬಗ್ಗೆ ವಿಶ್ವಾಸ ಮೂಡಿಸಲು ಅಗತ್ಯವಿರುವ ಪ್ರದೇಶಗಳಲ್ಲಿ ಸರ್ಕಾರದ ಮೇಲ್ವಿಚಾರಣೆಯಲ್ಲಿರುವ ಸ್ವತಂತ್ರ ತೂಕದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ರೈತ ಬೆಳೆದ ಕಬ್ಬಿನ ಒಂದು ಕಿಲೋ ತೂಕದಲ್ಲೂ ಅನ್ಯಾಯವಾಗಬಾರದು. ತೂಕದ ಬಗ್ಗೆ ಅನುಮಾನಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕ ವ್ಯವಸ್ಥೆ ರೂಪಿಸುವುದು ಸರ್ಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.
ರಿಕವರಿ ಪ್ರಮಾಣದ ಲೆಕ್ಕಾಚಾರ, ಕಬ್ಬು ಕಟಾವಿನ ನಂತರ ವಿಧಿಸಲಾಗುತ್ತಿದೆ ಎನ್ನಲಾದ ವೇಸ್ಟೇಜ್ ಹಾಗೂ ಇತರ ಕಡಿತಗಳ ಬಗ್ಗೆಯೂ ವೈಜ್ಞಾನಿಕ ಮತ್ತು ಪಾರದರ್ಶಕ ವ್ಯವಸ್ಥೆ ಅಗತ್ಯವಿದೆ. ಈ ವಿಷಯಗಳನ್ನು ಕೇಂದ್ರದ ಜಂಟಿ ಸಮಿತಿಯ ಮುಂದೆ ರಾಜ್ಯ ಸರ್ಕಾರ ಸಮಗ್ರವಾಗಿ ಮಂಡಿಸಲಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್ಪಿ ಜೊತೆಗೆ ಕರ್ನಾಟಕದಲ್ಲಿ ಈಗಾಗಲೇ ಕಾನೂನಿನಡಿ ಹೆಚ್ಚುವರಿ ಕಬ್ಬಿನ ದರ ನಿಗದಿಪಡಿಸುವ ವ್ಯವಸ್ಥೆ ಇದೆ. ರೈತರಿಗೆ ಇನ್ನಷ್ಟು ಲಾಭದಾಯಕ ಹಾಗೂ ಖಚಿತ ಬೆಲೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ SAP ಸೇರಿದಂತೆ ಇತರ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ಬೆಲೆ ನಿಗದಿ ಮಾದರಿಗಳನ್ನೂ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ದೆಹಲಿ ಸಭೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇಂದ್ರ ಸರ್ಕಾರ, ರೈತ ಸಂಘಟನೆಗಳು, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹಾಗೂ ಕೃಷಿ ವಿಜ್ಞಾನಿಗಳನ್ನು ಒಳಗೊಂಡ ಜಂಟಿ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ರೈತರು ಮತ್ತು ಸಕ್ಕರೆ ಉದ್ಯಮ ಎರಡೂ ಉಳಿಯಬೇಕು. ಆದರೆ ಯಾವುದೇ ವ್ಯವಸ್ಥೆಯಲ್ಲೂ ರೈತನಿಗೆ ಅನ್ಯಾಯವಾಗಬಾರದು. ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಷ್ಟೇ ಅಲ್ಲ, ಶಾಶ್ವತ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸುವುದೇ ರಾಜ್ಯ ಸರ್ಕಾರದ ಉದ್ದೇಶ ಎಂದು ಸಚಿವರು ತಿಳಿಸಿದ್ದಾರೆ.
ಕಬ್ಬು ಕಟಾವಿನ ಸೂಕ್ತ ಅವಧಿ, ಜಿಲ್ಲಾವಾರು ರಿಕವರಿ, ತೂಕದ ನಿಖರತೆ, ವೈಜ್ಞಾನಿಕ ಲ್ಯಾಬ್ ಪರೀಕ್ಷೆ, ವೇಸ್ಟೇಜ್ ಕಡಿತ, ರೈತರ ಪಾವತಿ, ಬೆಲೆ ನಿಗದಿ ಮತ್ತು ಆದಾಯ ಹಂಚಿಕೆ ಸಂಬಂಧಿತ ವಿಷಯಗಳನ್ನು ಸರ್ಕಾರ ಉನ್ನತ ಮಟ್ಟದ ಸಮಿತಿಯ ಎದುರು ಮಂಡಿಸಲಿದೆ ಎಂದು ಹೇಳಿದರು.


