Homeಕರ್ನಾಟಕಸಿರಿಗೆರೆ ಮಠದ ಸೇವೆ ಶ್ಲಾಘನೀಯ: ಸಚಿವ ಚಲುವರಾಯಸ್ವಾಮಿ

ಸಿರಿಗೆರೆ ಮಠದ ಸೇವೆ ಶ್ಲಾಘನೀಯ: ಸಚಿವ ಚಲುವರಾಯಸ್ವಾಮಿ

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ಅನುದಾನ ಬಿಡುಗಡೆ ಮಾಡಲಿ

ಪುಣ್ಯ ಕ್ಷೇತ್ರಗಳ ಧಾರ್ಮಿಕ ಆಚರಣೆಗಳಿಗೆ ಮಾತ್ರವಲ್ಲದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ರಂಗಗಳಲ್ಲೂ ಸೇವೆ ಮತ್ತು ಸೌಲಭ್ಯ ನೀಡಬಹುದು ಎನ್ನುವುದಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠವೇ ಸಾಕ್ಷಿ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠದ ಆಚರಣೆಗಳು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತವೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕೇವಲ ಮಠದ ಪೀಠಾಧಿಪತಿಗಳಾಗಿರಲಿಲ್ಲ. ಅವರು ಲಕ್ಷಾಂತರ ಗ್ರಾಮೀಣ ಬಡಮಕ್ಕಳ, ಶೋಷಿತರ ಮತ್ತು ರೈತರ ಪಾಲಿನ ಆಶಾಕಿರಣವಾಗಿದ್ದರು ಎಂದು ಸಚಿವರು ಹೇಳಿದರು.

ಅವರು ಕಟ್ಟಿದ ‘ತರಳಬಾಳು ವಿದ್ಯಾಸಂಸ್ಥೆ’ ಇಂದು ರಾಜ್ಯಾದ್ಯಂತ ಜ್ಞಾನದ ಬೆಳಕನ್ನು ಪಸರಿಸುತ್ತಿದೆ. ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಪ್ರತಿ ವರ್ಷ ನಡೆಯುವ ‘ತರಳಬಾಳು ಹುಣ್ಣಿಮೆ’ಯನ್ನು ಕೇವಲ ಧಾರ್ಮಿಕ ಆಚರಣೆಯಾಗಿಸದೆ, ರೈತರ, ಶ್ರಮಿಕರ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವ ‘ಜನತಾ ನ್ಯಾಯಾಲಯ’ವನ್ನಾಗಿ ರೂಪಿಸಿದ ಅವರ ದೂರದೃಷ್ಟಿ ಅಸಾಧಾರಣ ಎಂದು ಶ್ಲಾಘಿಸಿದರು.

ಮಳೆಯ ಅಭಾವವಿದ್ದಾಗ ಕೆರೆ ತುಂಬಿಸುವ ಯೋಜನೆಗಳ ಬಗ್ಗೆ ಧ್ವನಿ ಎತ್ತುವುದರಿಂದ ಹಿಡಿದು, ಅನ್ನದಾತರ ಬದುಕಿಗೆ ಧೈರ್ಯ ತುಂಬುವವರೆಗೆ ಮಠ ಸದಾ ಸರ್ಕಾರದ ಜೊತೆ ನಿಂತಿದೆ ಹಾಗೂ ಮಾರ್ಗದರ್ಶನ ನೀಡಿದೆ. ಈ ಮಾರ್ಗದರ್ಶನ ಮುಂದುವರಿಯಲಿ ಎಂದು ಆಶಿಸಿದರು.

ಲಿಂಗೈಕ್ಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿಯೇ ಇಂದಿನ ಜಗದ್ಗುರುಗಳಾದ ಪರಮ ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಮೂಲಕ ಸೇವಾಕಾರ್ಯಗಳನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡಲಿ

ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾರಂಭದಲ್ಲಿ ಎಸ್.ಎಂ. ಕೃಷ್ಣ ಅವರು 100 ಕೋಟಿ ಅನುದಾನ ನೀಡಿ ಸರ್ವೆ ನಡೆಸಿ ಚಾಲನೆ ನೀಡಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೊಡುಗೆಗಳನ್ನು ಮರೆಯುವಂತಿಲ್ಲ. ಸಿರಿಗೆರೆ ಸ್ವಾಮೀಜಿಗಳು ಈ ನೀರಿಗಾಗಿ ಸಲ್ಲಿಸಿರುವ ಮನವಿಗಳಿಗೆ ಲೆಕ್ಕವೇ ಇಲ್ಲ ಎಂದರು.

ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಅನುದಾನ ಈ ಅಕ್ಟೋಬರ್‌ನೊಳಗೆ ಬಿಡುಗಡೆಯಾದರೆ ಸುತ್ತಲಿನ ನಾಲ್ಕು ಜಿಲ್ಲೆಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಾವು ಸತತ ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಎಚ್. ಮುನಿಯಪ್ಪ, ರಘುಮೂರ್ತಿ, ಮಾಜಿ ಸಚಿವರಾದ ಜಿ.ಎಂ. ಸಿದ್ದೇಶ್ವರ್, ವಸಂತಪ್ಪ, ಸಿ.ಟಿ. ರವಿ ಹಾಗೂ ಇತರ ಶಾಸಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments