Homeಕರ್ನಾಟಕರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ, ಸಿಎಂ ರಾಜೀನಾಮೆ ನೀಡಲಿ: ಆರ್.ಅಶೋಕ್

ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ, ಸಿಎಂ ರಾಜೀನಾಮೆ ನೀಡಲಿ: ಆರ್.ಅಶೋಕ್

ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಣಕಾಸು ಇಲಾಖೆಯೇ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಎಚ್ಚರಿಕೆ ನೀಡಿದೆ ಎಂದು ಆರೋಪಿಸಿದರು. ಹೊಸ ಯೋಜನೆಗಳಿಗೆ ಹಣಕಾಸಿನ ಅವಕಾಶ ಸೀಮಿತವಾಗಿದ್ದು, ರಾಜ್ಯದ ಸಾಲ ಪಡೆಯುವ ಸಾಮರ್ಥ್ಯವೂ ಬಹುತೇಕ ಪೂರ್ಣಗೊಂಡಿದೆ ಎಂದು ಹಣಕಾಸು ಇಲಾಖೆಯ ಟಿಪ್ಪಣಿಯನ್ನು ಉಲ್ಲೇಖಿಸಿದರು.

“ಡಿಕೆ ದಿವಾಳಿ, ಇದು ಪಾಪರ್ ಸರ್ಕಾರ” ಎಂದು ಟೀಕಿಸಿದ ಅಶೋಕ್, ಮಂಗಳೂರು, ಕಲಬುರಗಿ, ಚಾಮರಾಜನಗರ ಹಾಗೂ ಬಾಗಲಕೋಟೆ ಸೇರಿದಂತೆ ವಿವಿಧೆಡೆ ಸಚಿವ ಸಂಪುಟ ಸಭೆ ನಡೆಸಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಆದರೆ, ಘೋಷಣೆಗಳಿಗೆ ಅಗತ್ಯವಿರುವ ಹಣಕಾಸಿನ ಲಭ್ಯತೆ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅಶೋಕ್ ಆಗ್ರಹಿಸಿದರು. ರಾಜ್ಯದ 2026-27ರ ಬಜೆಟ್‌ನಲ್ಲಿ ₹22,957 ಕೋಟಿ ಆದಾಯ ಕೊರತೆ ಮತ್ತು ₹97,448 ಕೋಟಿ ಹಣಕಾಸು ಕೊರತೆಯನ್ನು ಅಂದಾಜಿಸಲಾಗಿದೆ. ರಾಜ್ಯದ ಒಟ್ಟು ಬಾಕಿ ಹೊಣೆಗಾರಿಕೆಗಳು ಜಿಎಸ್‌ಡಿಪಿಯ ಶೇ.24.94ರಷ್ಟಿವೆ ಎಂದು ಬಜೆಟ್ ವಿಶ್ಲೇಷಣೆಯಲ್ಲಿಯೂ ಉಲ್ಲೇಖಿಸಲಾಗಿದೆ.

ಸರ್ಕಾರದ ಬಳಿ ಹಣಕಾಸಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬರ ಪರಿಹಾರ ಸೇರಿದಂತೆ ಅಗತ್ಯ ವೆಚ್ಚಗಳಿಗೆ ಆದ್ಯತೆ ನೀಡಬೇಕು. ರೈತರು, ಪಿಂಚಣಿದಾರರು, ಶಿಕ್ಷಕರು, ಹಾಲು ಉತ್ಪಾದಕರು ಹಾಗೂ ವಿವಿಧ ಇಲಾಖೆಗಳ ಬಾಕಿ ಪಾವತಿಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

“ಸರ್ಕಾರ ಘೋಷಣೆಗಳನ್ನು ಮಾಡುತ್ತಿದೆ. ಆದರೆ ಅವುಗಳನ್ನು ಜಾರಿಗೆ ತರಲು ಹಣಕಾಸಿನ ವ್ಯವಸ್ಥೆ ಏನು ಎಂಬುದನ್ನು ಜನರಿಗೆ ತಿಳಿಸಬೇಕು. ಹಣಕಾಸು ಇಲಾಖೆಯ ಎಚ್ಚರಿಕೆಯ ನಡುವೆಯೂ ಹೊಸ ಯೋಜನೆಗಳನ್ನು ಘೋಷಿಸುವುದು ಎಷ್ಟು ಸಮಂಜಸ?” ಎಂದು ಅಶೋಕ್ ಪ್ರಶ್ನಿಸಿದರು.

ರಾಜ್ಯದ ವಿವಿಧ ಇಲಾಖೆಗಳ ಬಾಕಿ ಬಿಲ್‌ಗಳು ₹2 ಲಕ್ಷ ಕೋಟಿಗೂ ಅಧಿಕವಾಗಿವೆ ಎಂದು ಅಶೋಕ್ ಆರೋಪಿಸಿದ್ದಾರೆ. ಸಾರಿಗೆ ಹಾಗೂ ವಿದ್ಯುತ್ ಸೇರಿದಂತೆ ಹಲವು ಇಲಾಖೆಗಳ ಹಣಕಾಸಿನ ಒತ್ತಡದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಈ ನಡುವೆ ಹಣಕಾಸು ಇಲಾಖೆಯು ಹೊಸ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ವರದಿಗಳು ಪ್ರಕಟವಾಗಿವೆ.

“ಹಣಕಾಸು ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಅಧಿಕಾರವಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಆರ್.ಅಶೋಕ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments