ನಾಳೆ ದೇಶಾದ್ಯಂತ ದೀಪ ಪ್ರಜ್ವಲನೆ; ಸೇವಾ ಸಂಕಲ್ಪ ಅಭಿಯಾನ
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.ಸೆಪ್ಟೆಂಬರ್ 17ರಂದು ಸಂಜೆ 7 ಗಂಟೆಗೆ ರಾಜ್ಯ ಹಾಗೂ ಇಡೀ ದೇಶದ ಐತಿಹಾಸಿಕ ಸ್ಥಳಗಳು ಮತ್ತು ಮನೆಮನೆಗಳಲ್ಲಿ ದೀಪ ಪ್ರಜ್ವಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ‘‘ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 25 ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ದೇಶವನ್ನು ಮುನ್ನಡೆಸುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಪೇಕ್ಷೆಯಂತೆ ಈ ಅಭಿಯಾನ ನಡೆಯಲಿದೆ. ಮೋದಿಜೀ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪ್ರದೇಶಗಳಲ್ಲೂ (ಉದಾ: ಶಿವಮೊಗ್ಗ ವಿಮಾನ ನಿಲ್ದಾಣ) ದೀಪ ಪ್ರಜ್ವಲನೆ ಮಾಡಲಾಗುವುದು. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸ್ಥಳೀಯ ಶಾಸಕರು ಪಾಲ್ಗೊಳ್ಳಲಿದ್ದಾರೆ’’ ಎಂದರು.
ದೀಪ ಪ್ರಜ್ವಲನೆ ಮೂಲಕ ಮೋದಿಜೀ ಅವರಿಗೆ ಭಗವಂತನು ಇನ್ನೂ ಹೆಚ್ಚು ಆಯುಸ್ಸು ಹಾಗೂ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ ಅವರು, ವಿಕಸಿತ ಭಾರತ ಸಂಕಲ್ಪ ಈಡೇರಬೇಕು ಹಾಗೂ ದೇಶವು ಜಾಗತಿಕ ಸವಾಲುಗಳ ನಡುವೆ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದು ವಿವರಿಸಿದರು. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಪ್ರಧಾನಮಂತ್ರಿಯವರ 25 ವರ್ಷಗಳ ಸೇವೆಯ ಅಂಗವಾಗಿ ವಿವಿಧ ರಾಜ್ಯಗಳ ಕಲಾವಿದರು ಚಿತ್ರಕಲಾಕೃತಿಗಳನ್ನು ಬಿಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಹೇಳಿಕೆ ದೇಶದ್ರೋಹ
‘‘ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಗಮನಿಸಿದ್ದೇನೆ. ಅಧಿಕಾರ ನೆತ್ತಿಗೇರಿದರೆ ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಇದು ಉದಾಹರಣೆ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಇದೇ ಕಾಂಗ್ರೆಸ್‌ನವರು ರಕ್ಷಣೆ ನೀಡಿದ್ದರು. ಹರಿಪ್ರಸಾದ್ ಅವರ ಹೇಳಿಕೆ ದೇಶದ್ರೋಹದ ಕೆಲಸ. ಇಂಥ ಹೇಳಿಕೆ ರಾಜ್ಯದಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದೆ. ಆಡಳಿತ ಪಕ್ಷದವರು ಕಾನೂನು-ಸುವ್ಯವಸ್ಥೆ ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ’’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಅವರಿಗೆ ತಿಂದದ್ದು ಅರಗುತ್ತಿಲ್ಲ; ಅಧಿಕಾರದ ಅಮಲಿನಿಂದ ಈ ರೀತಿ ಮಾಡುತ್ತಿದ್ದಾರೆ. ಇವರ ಸೊಕ್ಕನ್ನು ಅಡಗಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಮೂರು ತಿಂಗಳಾಗಿದೆ. ಅವರು ಕಡಿದು ಕಟ್ಟೆ ಹಾಕಿದ್ದಾದರೂ ಏನು ಎಂದು ಪ್ರಶ್ನಿಸಿದ ವಿಜಯೇಂದ್ರ ‘‘ಕಾಂಗ್ರೆಸ್ ಪರಿಸ್ಥಿತಿ ಒಂದು ಮನೆ, ಮೂರು ಬಾಗಿಲು ಎಂಬಂತಾಗಿದೆ. ಬಿ.ಕೆ. ಹರಿಪ್ರಸಾದ್ ಹಣೆಬರಹ ಡಿ.ಕೆ. ಶಿವಕುಮಾರ್‌ಗೂ ಗೊತ್ತಾಗಿದೆ. 100 ದಿನಗಳ ಸಮಾರಂಭದಲ್ಲಿ ಹರಿಪ್ರಸಾದ್ ಅವರನ್ನು ವೇದಿಕೆಗೂ ಹತ್ತಿಸಿಲ್ಲ. ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಒಂದೊಂದು ದಿಕ್ಕಿನಲ್ಲಿ ನಡೆದರೆ ಮುಖ್ಯಮಂತ್ರಿಗಳು ಏಕಾಂಗಿಯಾಗುತ್ತಿದ್ದಾರೆ’’ ಎಂದು ವಿಶ್ಲೇಷಿಸಿದರು.
ಕೃಷಿ ಸಾಲ ಮನ್ನಾ, ಕಸ್ತೂರಿರಂಗನ್ ವರದಿ
ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ಬರ ಪ್ರದೇಶಕ್ಕೆ ಸಚಿವರು ಪ್ರವಾಸ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಇವುಗಳನ್ನು ಸದನದಲ್ಲಿ ಮಾತನಾಡುವುದಾಗಿ ಹೇಳಿದರು. ಕಸ್ತೂರಿರಂಗನ್ ವರದಿ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ಮಾಡಿ ಅರಣ್ಯದಂಚಿನ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಹಿಂದೂಗಳ ಅಪಮಾನ, ಅಲ್ಪಸಂಖ್ಯಾತರ ತುಷ್ಟೀಕರಣ
ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿಗಳು ಇದ್ದಂತಿದೆ ಎಂದು ಆರೋಪಿಸಿದ ವಿಜಯೇಂದ್ರ, ಉಮರ್ ಖಾಲಿದ್‌ಗೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುವುದು ದೇಶದ್ರೋಹದ ಕೆಲಸ ಎಂದು ಟೀಕಿಸಿದರು. ಕಾರ್ಯಕ್ರಮಕ್ಕೆ ಅವಕಾಶ ನೀಡದ ವಿದ್ಯಾರ್ಥಿ ಪರಿಷತ್ತನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಗಣೇಶ ಹಬ್ಬ ಆಚರಣೆಗೆ ತೊಂದರೆ ನೀಡಿ ಹಿಂದೂಗಳ ಅಪಮಾನ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಕಾಂಗ್ರೆಸ್ ಸರ್ಕಾರ ಹೆದರಿಸಿ, ಬೆದರಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ಅದನ್ನು ತೊಡೆದುಹಾಕುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಹೇಳಿದರು.


