ಶಿಕ್ಷಕರ ಹೆಸರಿನ ಮುಂದೆ ‘Tr’ ಬಳಕೆಗೆ ಕ್ರಮ; ಜಿಲ್ಲೆ ಟಾಪ್ ಸ್ಥಾನಕ್ಕೇರಿದರೆ ವಿಶೇಷ ಉಡುಗೊರೆ
ವಿದ್ಯಾರ್ಥಿಗಳನ್ನು ಕೇವಲ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಉತ್ತೀರ್ಣಗೊಳಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿ, ಸುಸಂಸ್ಕೃತ ಸಮಾಜ ನಿರ್ಮಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಸಮಾಜದ ದಾರಿದೀಪ
ಇಂಜಿನಿಯರ್, ರೈತರು ಹಾಗೂ ಶ್ರಮಿಕರಷ್ಟೇ ಮಹತ್ವದ ಪಾತ್ರವನ್ನು ಸುಸಂಸ್ಕೃತ ನಾಡು ಕಟ್ಟುವಲ್ಲಿ ಶಿಕ್ಷಕರು ವಹಿಸುತ್ತಿದ್ದಾರೆ. ನಾವೆಲ್ಲರೂ ಶಿಕ್ಷಕರ ಋಣದಲ್ಲೇ ಬದುಕುತ್ತಿದ್ದೇವೆ. ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದೊಂದು ನಿರಂತರ ತಪಸ್ಸು ಎಂದು ಸಚಿವರು ಹೇಳಿದರು.
ಶಿಕ್ಷಕರ ಪವಿತ್ರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಅವರ ಹೆಸರಿನ ಮುಂದೆ ‘Tr’ ಬಳಸುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಮಂಡ್ಯಕ್ಕೆ ಪ್ರಥಮ ಸ್ಥಾನ ಗುರಿ
ಶಿಕ್ಷಕರು, ಪೋಷಕರು ಹಾಗೂ ಜಿಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದ ಪರಿಶ್ರಮದಿಂದ ಮಂಡ್ಯ ಜಿಲ್ಲೆ ಕಳೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 5ನೇ ಸ್ಥಾನಕ್ಕೇರಿದೆ. ಮುಂದಿನ ಸಾಲಿನಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸುವ ಗುರಿ ಹೊಂದಬೇಕು ಎಂದು ಸಚಿವರು ಕರೆ ನೀಡಿದರು.
ಶಿಕ್ಷಕರು ಈ ನಿಟ್ಟಿನಲ್ಲಿ ದೃಢ ಸಂಕಲ್ಪ ತೊಟ್ಟರೆ ಪ್ರಥಮ ಸ್ಥಾನ ಗಳಿಸುವುದು ಅಸಾಧ್ಯವಲ್ಲ. ಮಂಡ್ಯ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ ಶಿಕ್ಷಕರಿಗೆ ಅಚ್ಚರಿ ಮೂಡಿಸುವಂತಹ ವಿಶೇಷ ಉಡುಗೊರೆ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು.
ಅದೇ ರೀತಿ ಪಿಯುಸಿ ಫಲಿತಾಂಶದಲ್ಲೂ ಮಂಡ್ಯ ಜಿಲ್ಲೆ ರಾಜ್ಯದ ಟಾಪ್ 5ರೊಳಗೆ ಸ್ಥಾನ ಪಡೆಯುವಂತೆ ಶ್ರಮಿಸಬೇಕು ಎಂದು ಹೇಳಿದರು.
ಶಿಕ್ಷಕರ ಬೇಡಿಕೆಗಳಿಗೆ ಸರ್ಕಾರ ಬದ್ಧ
ಶಿಕ್ಷಕರಿಗೆ ಆದಷ್ಟು ಶೀಘ್ರದಲ್ಲಿ ಬಡ್ತಿ ನೀಡುವ ಸಂಬಂಧ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಸೇರಿದಂತೆ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಮೊದಲ ಆದ್ಯತೆಯಲ್ಲಿ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹1 ಕೋಟಿ ಅನುದಾನ ನೀಡಲಾಗುವುದು. ಇದರ ಜೊತೆಗೆ ಜಿಲ್ಲೆಯ ಶಾಸಕರು ತಲಾ ₹10 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರು ತಲಾ ₹5 ಲಕ್ಷ ಅನುದಾನ ನೀಡಲಿದ್ದಾರೆ ಎಂದು ಸಚಿವರು ಘೋಷಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
ಸರ್ಕಾರ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದು, ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆಗೆ ಪ್ರೋತ್ಸಾಹ ನೀಡುವುದು ಹಾಗೂ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಮತ್ತು ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಶಿಕ್ಷಕರು ಯಾವುದೇ ದ್ವಂದ್ವವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಲು ಅಗತ್ಯವಾದ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಕರ ಸಂಘದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


