ಅಲೆಮಾರಿ, ಅರೆಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ, ಬುಡಕಟ್ಟು ಸಮುದಾಯಗಳು ಸ್ವಂತ ಕಾಲಿನ ಮೇಲೆ ನಿಂತು ಸ್ವಾಭಿಮಾನದಿಂದ ಬದುಕಬೇಕು ಎಂದು ಕರೆ ನೀಡಿದ್ದಾರೆ.
ಸಮಾಜ ಸುಧಾರಣೆಗೆ ನಾಂದಿ ಹಾಡಿದ ಮಹಾನ್ ಚೇತನರಾದ ಬಿರ್ಸಾ ಮುಂಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ದೇವರಾಜ ಅರಸು ಅವರಿಗೆ ಪುಷ್ಪನಮನ ಸಲ್ಲಿಸಿದ ಅವರು, ಬಿರ್ಸಾ ಮುಂಡಾ ಆದಿವಾಸಿಗಳ ಮಹಾನ್ ನಾಯಕರಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ಕೇವಲ 30ನೇ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು ಎಂದು ಸ್ಮರಿಸಿದರು. ಅವರು ಸತ್ತು 150 ವರ್ಷಗಳಾದರೂ ಜಾರ್ಖಂಡ್ನ ಪ್ರತಿಯೊಬ್ಬ ಆದಿವಾಸಿಗೆ ಬಿರ್ಸಾ ಮುಂಡಾ ಇಂದಿಗೂ ಜೀವಂತ ದೈವವಾಗಿ ಉಳಿದಿದ್ದಾರೆ ಎಂದು ಹೇಳಿದರು.
“ಈ ದೇಶದ ಮೂಲ ನಿವಾಸಿಗಳು ಆದಿವಾಸಿ, ಬುಡಕಟ್ಟು ಹಾಗೂ ದಲಿತರು. ನೆಲದ ಯಜಮಾನರು ನೀವೇ. ನಿಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ. ನಿಮ್ಮಲ್ಲಿ ಕೀಳರಿಮೆ ಬರಬಾರದು. ನಿಮ್ಮ ಕಲೆ ಅಂತಾರಾಷ್ಟ್ರೀಯ ಮಟ್ಟಕ್ಕಿಂತ ಕಡಿಮೆಯಿಲ್ಲ. ಅದನ್ನು ಹೆಮ್ಮೆಯಿಂದ ಎಲ್ಲರಿಗೂ ತೋರಿಸಿ” ಎಂದು ಹರಿಪ್ರಸಾದ್ ಅವರು ಬುಡಕಟ್ಟು ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿಮ್ಮ ಸಮುದಾಯದವರೇ ಎಂದು ನೆನಪಿಸಿದ ಅವರು,“ಐದು ವರ್ಷಕ್ಕೊಮ್ಮೆ ಮತ ಹಾಕುವುದು ನಿಮ್ಮ ದೊಡ್ಡ ಶಕ್ತಿ. ಹಣ ಅಥವಾ ಹೆಂಡಕ್ಕೆ ಮತ ಮಾರಬೇಡಿ. ನಿಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ನ್ಯಾಯ ಕೊಡುವವರಿಗೆ ಮಾತ್ರ ಮತ ನೀಡಿ. ಸಣ್ಣ ಸಮುದಾಯ ಎಂದು ಯಾರೂ ನಿಮ್ಮನ್ನು ಕಡೆಗಣಿಸುವಂತಿಲ್ಲ. ನಿಮ್ಮ ಮತ ವಿರುದ್ಧ ಬಿದ್ದರೆ ಯಾರೂ ಗೆಲ್ಲಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.
ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ತಂದ ಅರಣ್ಯ ಹಕ್ಕು ಕಾಯ್ದೆ ಹಾಗೂ ಆಹಾರ ಭದ್ರತಾ ಕಾಯ್ದೆ ಬುಡಕಟ್ಟು ಸಮುದಾಯಗಳಿಗೆ ದೊಡ್ಡ ರಕ್ಷಣೆ ನೀಡಿವೆ ಎಂದು ನೆನಪಿಸಿದ ಅವರು, ಕಾಂಗ್ರೆಸ್ ಪಕ್ಷ ಯಾವಾಗಲೂ ಈ ಸಮುದಾಯಗಳ ಪರವಾಗಿ ನಿಂತಿದೆ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಲ್ಲಪ್ಪ ಅವರಿಗೆ ಶುಭಾಶಯಗಳನ್ನು ಸಲ್ಲಿಸಿ “ನಿಮ್ಮ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತದೆ” ಎಂದು ಭರವಸೆ ನೀಡಿದರು.


