ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಹಿಂದೆ ಯಾವುದೇ ಅಸಮಾಧಾನದ ಕಾರಣಗಳಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಹಾಗೊಂದು ವೇಳೆ ಅಸಮಾಧಾನವಿದ್ದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯನವರು ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಸಿದ್ದರಾಮಯ್ಯ ಅವರು ಪ್ರಸ್ತುತ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ ಪ್ರಕ್ರಿಯೆಯಾಗಿದೆ. ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನಗಳು ಪೂರೈಸಿವೆ. ಸಾಕಷ್ಟು ಸವಾಲುಗಳು ಮುಂದಿವೆ. ದೃತಿಗೆಡದೆ ಎಲ್ಲವನ್ನೂ ನಿಭಾಯಿಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದು ಅವರು ಹೇಳಿದರು.
ಅವಿರೋಧ ಆಯ್ಕೆಯಿಂದಲೇ ಎಸ್. ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು
ಅವಿರೋಧವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಚುನಾವಣೆ ನಡೆಸುವುದು ಬೇಡ ಎಂಬುದು ಪಕ್ಷದ ನಿರ್ಧಾರವಾಗಿತ್ತು. ಹಾಗಾಗಿ ಕೊನೆಯ ಹಂತದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರನ್ನು ಆಯ್ಕೆ ಮಾಡಲಾಗಿದೆ. ನಿರ್ಣಾಯಕ ಸಭೆಯಲ್ಲಿ ಕೆ.ಎನ್. ರಾಜಣ್ಣ ಅವರೂ ಹಾಜರಿದ್ದರು. ಅವರ ಸಮ್ಮತಿ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಹಾಗಾಗಿ ಈ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪರಮೇಶ್ವರ ಅವರು ಹೇಳಿದರು.
ಅಪೆಕ್ಸ್ ಬ್ಯಾಂಕ್ ಸ್ವತಂತ್ರ ಹಾಗೂ ಪಕ್ಷಾತೀತ ಸಂಸ್ಥೆಯಾಗಿದೆ. ಅದರ ಆಡಳಿತ ಮಂಡಳಿಯ ನಿರ್ದೇಶಕರು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ತುಮಕೂರಿನಲ್ಲಿ ನಕ್ಸಲ್ ಚಟುವಟಿಕೆ ಖಾತರಿಯಾದರೆ ನಿಗ್ರಹ ಪಡೆ
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಪೋಸ್ಟರ್ ಪ್ರತ್ಯಕ್ಷವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು “ನನ್ನ ಗಮನಕ್ಕೆ ಬಂದಿದೆ. ಇಂದು ತುಮಕೂರಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಯ ಎಸ್‌ಪಿ ಅವರ ಜೊತೆ ಈ ಕುರಿತು ಚರ್ಚೆ ಮಾಡುತ್ತೇನೆ. ಅಂತಹ ಬೆಳವಣಿಗೆ ಕಂಡುಬಂದರೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು” ಎಂದರು.
ನಕ್ಸಲ್ ಮುಕ್ತ ಕರ್ನಾಟಕ ಘೋಷಣೆ ಬಳಿಕ ಕಾರ್ಕಳದಲ್ಲಿದ್ದ ನಕ್ಸಲ್ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಆಗಿ ಪರಿವರ್ತಿಸಲಾಗಿದೆ. ಇನ್ನರ್ಧ ಪಡೆ ನಕ್ಸಲ್ ನಿಗ್ರಹ ದಳವಾಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಪಾವಗಡದಲ್ಲಿ ನಕ್ಸಲ್ ಚಟುವಟಿಕೆ ಖಾತರಿಯಾದರೆ ನಕ್ಸಲ್ ನಿಗ್ರಹ ಪಡೆಯನ್ನು ತುಮಕೂರಿಗೆ ಕರೆಸುತ್ತೇವೆ ಎಂದು ಅವರು ಹೇಳಿದರು.
ಮಾಜಿ ಯೋಧರಿಗೂ ನಿವೇಶನ
ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಗೆ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಯಡಿ ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು. ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ತಿಳಿಸಿದರು.


