ತಕ್ಷಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿಶೇಷ ಹಿರಿಯ ನ್ಯಾಯವಾದಿ ನೇಮಕ ಮಾಡಿ
ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ನಿರಂತರವಾಗಿ ಸಂಕಷ್ಟ ಅನುಭವಿಸುತ್ತಿದ್ದರೂ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ಮುಂದೆ ರಾಜ್ಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಭಾವನೆ ರೈತರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ಮೂಡಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಆದೇಶದ ಪ್ರಕಾರ 15 ದಿನಗಳ ಕಾಲ 6,000 ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ. ಇದರಿಂದ ಸುಮಾರು 7.5 ಟಿಎಂಸಿ ನೀರು ಹೊರಹೋಗಲಿದೆ. ಈಗಾಗಲೇ ಕಬಿನಿ ಜಲಾಶಯದ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ. ಕೆಆರ್‌ಎಸ್‌ನಿಂದ ಪ್ರತಿದಿನ 5,000ರಿಂದ 6,000 ಕ್ಯೂಸೆಕ್ಸ್ ನೀರು ಬಿಡುತ್ತಿರುವುದರಿಂದ ಪ್ರತಿದಿನ ಅರ್ಧ ಟಿಎಂಸಿ ನೀರು ಕಡಿಮೆಯಾಗುತ್ತಿದೆ. ಮಳೆ ಬರುವ ಲಕ್ಷಣಗಳೂ ಕಾಣುತ್ತಿಲ್ಲ. ಈ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.
ತಮಿಳುನಾಡು ಮೆಟ್ಟೂರಿನಿಂದ 40 ಟಿಎಂಸಿ ಹಾಗೂ ಒಟ್ಟು 80 ಟಿಎಂಸಿ ನೀರು ಬಿಡುವ ಯೋಜನೆ ಹಾಕಿಕೊಂಡಿದೆ. ಅಲ್ಲಿನ ಮಂತ್ರಿಗಳು ಮೂರನೇ ಬೆಳೆಗೆ ನೀರು ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ಜನರು ಬದುಕಿಗಾಗಿ ನೀರು ಬೇಡುತ್ತಿರುವಾಗ ತಮಿಳುನಾಡು ಸಾಂಬಾರ್ ಮತ್ತು ಕುರುವೈ ಬೆಳೆಗಾಗಿ ನೀರು ಬೇಡುತ್ತಿದೆ. ಈ ಕಟುಸತ್ಯವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಬಾರಿ ತಮಿಳುನಾಡಿನ ಅರ್ಜಿಗೆ ಉತ್ತರಿಸುವ ರೆಸ್ಪಾಂಡೆಂಟ್ ಆಗಿರುವ ಬದಲು ಕರ್ನಾಟಕವೇ ಪಿಟಿಷನರ್ ಆಗಿ ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ಅಂಕಿ-ಅಂಶಗಳ ಜೊತೆಗೆ ರೈತರ ಸಂಕಷ್ಟ, ಕುಡಿಯುವ ನೀರಿನ ಅಭಾವ ಮತ್ತು ಮುಂಬರುವ ಹಾಹಾಕಾರವನ್ನು ಸ್ಪಷ್ಟವಾಗಿ ಮಂಡಿಸಬೇಕು. ಇದಕ್ಕಾಗಿ ವಿಶೇಷ ಹಿರಿಯ ನ್ಯಾಯವಾದಿಯನ್ನು ನೇಮಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಮಂತ್ರಿಮಂಡಲ ರಚನೆಗಾಗಿ ಹಲವು ಬಾರಿ ದೆಹಲಿಗೆ ಹೋಗುವ ಮುಖ್ಯಮಂತ್ರಿಗಳು ಈ ವಿಷಯಕ್ಕಾಗಿ ದೆಹಲಿಗೆ ಹೋಗಿ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿ ನ್ಯಾಯಾಂಗ ತಂಡಕ್ಕೆ ಹೊಸ ಶಕ್ತಿ ತುಂಬಬೇಕು. ಇಲ್ಲವಾದರೆ ಕಾವೇರಿ ಜಲಾನಯನ ಪ್ರದೇಶ ಮತ್ತು ಬೆಂಗಳೂರು ನೀರಿನ ಹಾಹಾಕಾರದಲ್ಲಿ ಮುಳುಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
“ಈ ಭಾಗದ ಜನರು ಶಾಪ ಹಾಕುವುದು ಅಷ್ಟೇ ಅಲ್ಲ. ಕಳೆದ ಬಾರಿ ನೀಡಿದ್ದ ಬೆಂಬಲವೂ ಶೂನ್ಯವಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


