ಬೆಂಗಳೂರಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ವಾಹನ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಐದು ಪ್ರಮುಖ ಫ್ಲೈಓವರ್ಗಳು/ಎಲಿವೇಟೆಡ್ ಕಾರಿಡಾರ್ಗಳಲ್ಲಿ ವಿವಿಧ ವರ್ಗದ ವಾಹನಗಳ ಸಂಚಾರಕ್ಕೆ ವಿಧಿಸಲಾಗಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಐದು ಪ್ರಮುಖ ಎಲಿವೇಟೆಡ್ ಕಾರಿಡಾರ್ಗಳಲ್ಲಿ ನಾಲ್ಕರಲ್ಲಿ ಈಗಾಗಲೇ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಿದ ಬಳಿಕ ಬೆಂಗಳೂರು ಸಂಚಾರ ಪೊಲೀಸರು ಮೊದಲು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ಗಳಲ್ಲಿ ಸಂಚಾರವು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುತ್ತಿರುವುದು ಕಂಡುಬಂದಿದೆ ಎಂದು ಸಚಿವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್ನಲ್ಲಿ (ಸಂಜೀವನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗೆ) ಏಕಕಾಲದಲ್ಲಿ ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಂತಹ ಹಲವು ವರ್ಗದ ವಾಹನಗಳನ್ನು ಪ್ರವೇಶ ಮಾರ್ಗಗಳಲ್ಲೇ ಕೆಳಗಿನ ರಸ್ತೆಗೆ ತಿರುಗಿಸುವುದರಿಂದ ಸಂಚಾರ ಸಂಘರ್ಷ, ಸರತಿ ಸಾಲು ಹಾಗೂ ದಟ್ಟಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಎಲಿವೇಟೆಡ್ ಕಾರಿಡಾರ್ಗೆ ಹೊಂದಿಕೊಂಡಿರುವ ಕೆಳಮಟ್ಟದ ರಸ್ತೆಯ ಸಂಚಾರದ ಮೇಲೂ ಹೆಚ್ಚುವರಿ ಪರಿಣಾಮ ಉಂಟಾಗುತ್ತಿದೆ ಎಂಬ ಮಾಹಿತಿಯನ್ನು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ, ಈ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್ನಲ್ಲಿ ಸಂಚಾರ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಮೊದಲ ಹಂತದಲ್ಲಿ ಸರಕು ವಾಹನಗಳಿಗೆ ನಿರ್ಬಂಧ ಮುಂದುವರಿಕೆ
ಮೊದಲ ಹಂತದಲ್ಲಿ ಈಗಾಗಲೇ ಅಧಿಸೂಚನೆ ಮೂಲಕ ನಿಗದಿಪಡಿಸಿರುವ ಸಮಯದಲ್ಲಿ ಸರಕು ಸಾಗಣೆ ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ, ಪ್ರಸ್ತುತ ಹಂತದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್ ಬಳಸಲು ಅವಕಾಶ ನೀಡಲಾಗುತ್ತದೆ. ದ್ವಿಚಕ್ರ ವಾಹನ ಸವಾರರು ಮುಖ್ಯವಾಗಿ ಎಡಭಾಗದ ಲೇನ್ ಬಳಸಬೇಕು, ಲೇನ್ ಶಿಸ್ತನ್ನು ಪಾಲಿಸಬೇಕು, ಅಪಾಯಕಾರಿ ಓವರ್ಟೇಕಿಂಗ್ ತಪ್ಪಿಸಬೇಕು ಹಾಗೂ ಗಂಟೆಗೆ 60 ಕಿ.ಮೀ. ಮೀರದ ಸುರಕ್ಷಿತ ವೇಗದಲ್ಲಿ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ ಎಂಬ ಸಂಗತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ಸೆ.11ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲೂ ಹಂತ ಹಂತದ ಜಾರಿ
ಇದೇ ರೀತಿಯ ಹಂತ ಹಂತದ ಕ್ರಮವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲೂ ಅನುಸರಿಸಲಾಗುವುದು. ಮೊದಲ ಹಂತದಲ್ಲಿ ಸರಕು ವಾಹನಗಳ ಮೇಲಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತದೆ. ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ಎಲಿವೇಟೆಡ್ ಕಾರಿಡಾರ್ನಲ್ಲಿ ಸಂಚರಿಸಲು ಅವಕಾಶ ಮುಂದುವರಿಯಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಸಂಚಾರ ನಿರ್ಬಂಧಗಳ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಿ, ಅದರ ಆಧಾರದ ಮೇಲೆ ಉಳಿದಿರುವ ಅಧಿಸೂಚಿತ ನಿರ್ಬಂಧಗಳನ್ನೂ ಹಂತ ಹಂತವಾಗಿ ಮತ್ತು ಸಮತೋಲಿತ ರೀತಿಯಲ್ಲಿ ಜಾರಿಗೊಳಿಸಲಾಗುವುದು ಎಂದಿರುವ ಸಚಿವರು, ಈ ಸಂದರ್ಭದಲ್ಲಿ ವಾಹನಗಳ ಸಂಚಾರದ ಹರಿವು, ರಸ್ತೆ ಸುರಕ್ಷತಾ ಪರಿಸ್ಥಿತಿ, ಪ್ರವೇಶ ಮಾರ್ಗಗಳಲ್ಲಿ ನಿರ್ಬಂಧಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆ ಹಾಗೂ ಎಲಿವೇಟೆಡ್ ಕಾರಿಡಾರ್ಗೆ ಹೊಂದಿಕೊಂಡಿರುವ ಕೆಳಮಟ್ಟದ ರಸ್ತೆಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಕೇವಲ ಆದೇಶದ ಆಧಾರದ ಮೇಲೆ ಜಾರಿಗೊಳಿಸುವ ಬದಲು, ಸ್ಥಳೀಯ ಸಂಚಾರ ಪರಿಸ್ಥಿತಿಯ ನೈಜ ಪರಿಣಾಮವನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲವಾಗುವ ರೀತಿಯಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸುವುದು ನಮ್ಮ ಉದ್ದೇಶ. ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರ ಎರಡಕ್ಕೂ ಸಮಾನ ಆದ್ಯತೆ ನೀಡಲಾಗುವುದು” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


