Homeಕರ್ನಾಟಕಶೀಘ್ರದಲ್ಲೇ ಇನ್ನೂ 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆ : ಡಿಸಿಎಂ ಪರಮೇಶ್ವರ 

ಶೀಘ್ರದಲ್ಲೇ ಇನ್ನೂ 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆ : ಡಿಸಿಎಂ ಪರಮೇಶ್ವರ 

ರಾಜ್ಯದಲ್ಲಿ ಬರ ಪರಿಶೀಲನೆ ಪ್ರಕ್ರಿಯೆ ಇನ್ನೂ ಮುಕ್ತಾಯವಾಗಿಲ್ಲ. ಹಂತ ಹಂತವಾಗಿ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಎರಡನೇ ಹಂತದ ಪರಿಶೀಲನೆ ನಡೆಯುತ್ತಿದ್ದು, 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿವೆ. ಇವುಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದರು.

ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ವಿಳಂಬವಾಗಿಲ್ಲ. ಮುಂಗಾರು ಮತ್ತು ಹಿಂಗಾರು ಕಡಿಮೆಯಾಗುವವರೆಗೂ ಪರಿಶೀಲನೆ ಮುಂದುವರಿಯುತ್ತದೆ. ಕಳೆದ ಬಾರಿ ಸುಮಾರು 200 ತಾಲ್ಲೂಕುಗಳನ್ನು ಘೋಷಿಸಲಾಗಿತ್ತು. ಈ ಬಾರಿಯೂ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲ್ಪಡುವ ಸಾಧ್ಯತೆ ಇದೆ. ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬರ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದರು.

ಕೆಲವು ಶಾಸಕರು ತಮ್ಮ ತಾಲ್ಲೂಕುಗಳನ್ನು ಬೇಕೆಂದೇ ಬರಪೀಡಿತವೆಂದು ಘೋಷಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, “ತೀವ್ರ ಬರ ಇದ್ದರೂ ತಮ್ಮ ತಾಲ್ಲೂಕುಗಳನ್ನು ಘೋಷಿಸಿಲ್ಲ ಎಂದು ಯಾರೂ ಆತಂಕಪಡಬೇಕಾಗಿಲ್ಲ. ಇಡೀ ರಾಜ್ಯವೇ ಬರಗಾಲವನ್ನು ಎದುರಿಸುತ್ತಿದೆ. ಬರಪೀಡಿತ ಪ್ರದೇಶಗಳ ಘೋಷಣೆಯಲ್ಲಿ ರಾಜ್ಯ ಸರ್ಕಾರದ ಯಾರೊಬ್ಬರ ಪಾತ್ರವೂ ಇಲ್ಲ. ಬೇಕೆಂದೇ ಕೆಲವು ತಾಲ್ಲೂಕುಗಳನ್ನು ಕೈಬಿಟ್ಟಿದ್ದಾರೆ ಎಂಬುದು ಆಧಾರರಹಿತ ಆರೋಪ. ಪಕ್ಷ ನೋಡಿಕೊಂಡು ಬರ ಸಂಭವಿಸಿಲ್ಲ. ಈಗಾಗಲೇ ಘೋಷಿತ ಪಟ್ಟಿಯಲ್ಲಿ ವಿರೋಧ ಪಕ್ಷದ ಶಾಸಕರ ತಾಲ್ಲೂಕುಗಳೂ ಇವೆ” ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರವೇ ಸ್ವಂತ ನಿರ್ಧಾರದಿಂದ ಘೋಷಣೆ ಮಾಡಿದರೆ ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರದ ಬರಪರಿಹಾರ ಪಡೆಯಲು ಸಹನೆಯಿಂದ ವರ್ತಿಸುವುದು ಉತ್ತಮ. ಕೇಂದ್ರ ಸರ್ಕಾರದ ನಿಯಮಗಳಡಿ ಉಪಗ್ರಹ ಆಧಾರಿತ ಚಿತ್ರಗಳು, ಗ್ರೌಂಡ್ ಟ್ರುಥಿಂಗ್ ಮತ್ತು ವೈಜ್ಞಾನಿಕ ಅಧ್ಯಯನದ ನಂತರವೇ ಘೋಷಣೆ ಮಾಡಲಾಗುತ್ತದೆ. ಇದನ್ನು ಅಧಿವೇಶನದಲ್ಲಿಯೂ ಸ್ಪಷ್ಟಪಡಿಸಿದ್ದೇನೆ ಎಂದು ಅವರು ಒತ್ತಿ ಹೇಳಿದರು.

ಅಹಿಂದದಲ್ಲಿ ಒಡಕಿಲ್ಲ
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಸಿದ್ದರಾಮಯ್ಯನವರಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಸತೀಶ್ ಜಾರಕಿಹೊಳಿ ಮತ್ತು ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಆಹ್ವಾನ ಇಲ್ಲದಿರುವ ವಿಚಾರವನ್ನು ಪ್ರಸ್ತಾಪಿಸಿ, ಅಹಿಂದದಲ್ಲಿ ಒಡಕು ಮೂಡಿದೆಯೇ ಎಂದು ಕೇಳಿದಾಗ, “ಮೊನ್ನೆ ನಡೆದಿದ್ದು ಅಹಿಂದ ಸಮಾವೇಶವಲ್ಲ. ನಮ್ಮಲ್ಲಿ ಯಾವುದೇ ಒಡಕಿಲ್ಲ. ಅಹಿಂದ ನಾಯಕತ್ವ ಕವಲುದಾರಿ ಹಿಡಿದಿಲ್ಲ” ಎಂದು ಸ್ಪಷ್ಟಪಡಿಸಿದರು.

ನೈಸ್‌ ನಿವೇಶನ ಹಂಚಿಕೆ: ಮಾನವೀಯತೆ ದೃಷ್ಟಿಯಿಂದ
ನೈಸ್‌ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ರಕ್ಕೆ ಸಂಬಂಧಿಸಿ, “ಭೂಮಿ ಕಳೆದುಕೊಂಡವರಿಗಿಂತ ಸಚಿವ ಸಂಪುಟದಲ್ಲಿರುವಂತಹ ಅನೇಕರು ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪ ಆಧಾರರಹಿತ. ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಮಾನವೀಯತೆ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಕೆಲವು ಲಕ್ಷಗಳಿಗೆ ಬಿಟ್ಟುಕೊಟ್ಟ ರೈತರಿಗೆ ಅನ್ಯಾಯವಾಗದಂತೆ 1,453 ನಿವೇಶನಗಳನ್ನು ಹಂಚಿಕೆ ಮಾಡುವ ನಿರ್ಧಾರ ಮಾಡಿದ್ದೇವೆ.ಯಾರಿಗೂ ವೈಯಕ್ತಿಕ ಲಾಭ ಮಾಡಿಕೊಡುವ ಉದ್ದೇಶವಿಲ್ಲ” ಎಂದು ಹೇಳಿದರು.

ಅಪೆಕ್ಸ್‌ ಬ್ಯಾಂಕ್ ಚುನಾವಣೆ
ಅಪೆಕ್ಸ್‌ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ, ಕೆ.ಎನ್. ರಾಜಣ್ಣ ಅವರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ಒಂದೇ ಜಿಲ್ಲೆಯವರಾದ ನಾವು ಈ ವಿಚಾರವಾಗಿ ಭೇಟಿಯಾಗಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ದೇಶಕರನ್ನೆಲ್ಲ ಕರೆದು ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ ಎಂದರು.

ಇಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಕಾವೇರಿ ನೀರನ್ನು 4.8 ಹೆಕ್ಟೇರ್ ಪ್ರದೇಶದ ಕೃಷಿಗೆ ಬಳಸುತ್ತಿರುವ ವಿಚಾರವನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಲಿದೆ ಎಂದು ಅವರು ತಿಳಿಸಿದರು.

ಇಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರವು ತಮಿಳುನಾಡು ಕಾವೇರಿ ನೀರನ್ನು 4.8 ಹೆಕ್ಟೆರ್‌ ಪ್ರದೇಶದ ಕೃಷಿಗೆ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾವಿಸಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments