Homeಕರ್ನಾಟಕಹಿಟ್ ಅಂಡ್ ರನ್ ಆಟ ನಡೆಯಲ್ಲ, ಬಹಿರಂಗ ಚರ್ಚೆಗೆ ಬನ್ನಿ:  ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಸವಾಲು

ಹಿಟ್ ಅಂಡ್ ರನ್ ಆಟ ನಡೆಯಲ್ಲ, ಬಹಿರಂಗ ಚರ್ಚೆಗೆ ಬನ್ನಿ:  ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಸವಾಲು

– ಕುಮಾರಸ್ವಾಮಿಗೆ ರಾತ್ರಿ ನಿದ್ದೆ ಬರ್ತಿಲ್ಲ, ಹೊಟ್ಟೆನೋವಿಗೆ ನಾನು ಔಷಧಿ ಕೊಡಲಾಗಲ್ಲ – ಚಲುವರಾಯಸ್ವಾಮಿ ವ್ಯಂಗ್ಯ

– ತಾಕತ್ತಿದ್ದರೆ ವಿಧಾನಸೌಧಕ್ಕೆ ಬನ್ನಿ ಚರ್ಚೆ ಮಾಡೋಣ – ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲ್

ಬಹಿರಂಗ ಚರ್ಚೆಗೆ ಬರಲಿ, ಅವರ ಹಿಟ್ ಅಂಡ್ ರನ್ ಆಟ ನಡೆಯಲ್ಲ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಖಡಕ್ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ದೆಹಲಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದರೇನೋ? ನಾನು ರಾಜ್ಯದ ನೀರಾವರಿ ಸಮಸ್ಯೆಗಳನ್ನು ಚರ್ಚಿಸಲು ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ” ಎಂದು ಟಾಂಗ್ ನೀಡಿದರು.

“ಕೇಂದ್ರ ಮಂತ್ರಿಯಾಗಿದ್ದರೂ ಸದಾ ಕಾಲ ರಾಜ್ಯದಲ್ಲೇ ಇರುವವರಿಗೆ ಏನು ಗೊತ್ತಿದೆ? ಎರಡುವರೆ ವರ್ಷದಿಂದ ಕೇಂದ್ರ ಮಂತ್ರಿಯಾಗಿ ಅವರೇನು ಕೆಲಸ ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ಹೇಳಲಿ. ಅವರಿಗೆ ಉತ್ತರ ನೀಡಲು ನನಗೆ ಅಸಹ್ಯ ಎನಿಸುತ್ತದೆ. ಮಾಜಿ ಮುಖ್ಯ ಮಂತ್ರಿಯಾಗಿದ್ದವರಿಗೆ ನಾಲಿಗೆ ಹಿಡಿತದಲ್ಲಿರಬೇಕು” ಎಂದು ವಾಗ್ದಾಳಿ ನಡೆಸಿದರು.

“ದೇಶದ ಅತೀ ದೊಡ್ಡ ಎರಡು ಖಾತೆಗಳನ್ನು ಇಟ್ಟುಕೊಂಡು, ರಾಜ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದನ್ನು ಬಿಟ್ಟು ಇನ್ನೇನು ಮಾಡಿದ್ದಾರೆ? ಅಮರಾವತಿ ಚಂದ್ರಬಾಬು ನಾಯ್ಡು ಅವರ ಕೊಡುಗೆ. ಇಲ್ಲಿ ಚಂದ್ರಬಾಬು ನಾಯ್ಡು ಅವರ ಕೊಡುಗೆ ಇದೆ. ಆದರೆ, ಕುಮಾರಸ್ವಾಮಿ ಅವರ ಕೊಡುಗೆ ಏನು? ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡಿಸಲು ಕೇಂದ್ರದ ಕೈಯಲ್ಲಿ ಆಗಿಲ್ಲ. ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನವನ್ನು ಕೊಡಿಸುವಲ್ಲಿ ಯಶಸ್ವಿಯಾಗಲಿ” ಎಂದು ಹೇಳಿದರು.

“*ಎಚ್‌ಡಿಕೆಗೆ ರಾತ್ರಿ ಹೊತ್ತು ನಿದ್ರೆ ಬರುತ್ತಿಲ್ಲ*. ಒಂದು ಕಡೆ ಮಗ್ಗಲು ಬದಲಿಸಿದರೆ ಸಿಎಂ ಡಿ.ಕೆ. ಶಿವಕುಮಾರ್ ಕಾಣಿಸುತ್ತಾರೆ, ಮತ್ತೊಂದು ಕಡೆ ಹೊರಳಿದರೆ ನಾನು ಮತ್ತು ಬಾಲಕೃಷ್ಣ ಕಾಣುತ್ತೇವೆ. ನಾನು ನೀರಾವರಿ ಸಚಿವನಾಗಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ಹೊಟ್ಟೆನೋವಿಗೆ ನಾನು ಔಷಧಿ ನೀಡಲು ಆಗುವುದಿಲ್ಲ” ಎಂದರು.

“ನಾನು ಕುಮಾರಸ್ವಾಮಿ ಬಗ್ಗೆ ಹೇಳಲು ಶುರು ಮಾಡಿದರೆ ಅವರಿಗೆ ತಡೆದುಕೊಳ್ಳುವಷ್ಟು ತಾಕತ್ತಿಲ್ಲ. ಅವರಿಗೆ ತಾಕತ್ತಿದ್ದರೆ ವಿಧಾನಸೌಧ ಇಲ್ಲವೇ ಯಾವುದೇ ಟಿವಿ ಚಾನೆಲ್‌ಗಾದರೂ ಬರಲಿ, ನಾನು ಚರ್ಚೆ ಮಾಡುತ್ತೇನೆ. 2006ರಲ್ಲಿ ಸಿಎಂ ಆಗಿದ್ದ ಅವರು ಎರಡು ದಿನ ನಾಪತ್ತೆಯಾಗಿದ್ದರು. ಅವರನ್ನು ಹುಡುಕಿ ಬೆಳಿಗ್ಗೆ ಕ್ಯಾಬಿನೆಟ್‌ಗೆ ಕರೆತರುವ ಟಾಸ್ಕ್ ಅನ್ನು ದೇವೇಗೌಡರು ನನಗೆ ನೀಡಿದ್ದರು. ಅದಕ್ಕಾಗಿ ನಾನು ಬೆಳಿಗ್ಗೆ 5 ಗಂಟೆಗೆ ಮನೆ ಬಾಗಿಲು ಬಡಿದಿದ್ದೆ. ನಾನು ಆಗ ಯಾರ ಮನೆ ಬಾಗಿಲು ಬಡಿದಿದ್ದೆ ಎಂಬುದನ್ನು ವಿವರವಾಗಿ ಕೇಳಲು ಆಸೆ ಇದ್ದರೆ ಹೇಳುತ್ತೇನೆ. ನಾನು ಅವರಂತೆ ಹಿಟ್ ಅಂಡ್ ರನ್ ಕೆಲಸ ಮಾಡುವುದಿಲ್ಲ” ಎಂದು ಸವಾಲು ಹಾಕಿದರು.

“ಕೆಪಿಎಸ್‌ಸಿಯಲ್ಲಿ ಅಕ್ರಮ ನಡೆದಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಲಿ. ಇದರೊಂದಿಗೆ ನೀಟ್ ಸೇರಿದಂತೆ ಎಲ್ಲವೂ ತನಿಖೆಯಾಗಲಿ. ಆದರೆ ಈಗ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು? ಆ ನೇಮಕದ ಹೊಣೆಯನ್ನು ಬಿಜೆಪಿ-ಜೆಡಿಎಸ್ ಹೊರಬೇಕು. ಪ್ರಸ್ತುತ ಕೆಇಎಯಲ್ಲಿ ಯಾವುದೇ ಅಕ್ರಮಗಳಿಲ್ಲ” ಎಂದರು.

“ನೀರಾವರಿ ಸಮಸ್ಯೆ ಚರ್ಚೆಗೆ ದೆಹಲಿಗೆ ಹೋಗಿದ್ದೆ. ಮೇಕೆದಾಟು ಬಗ್ಗೆ CWC ಜೊತೆ ಒಂದು ಗಂಟೆಗೂ ಹೆಚ್ಚು ಚರ್ಚಿಸಿದ್ದೇವೆ. ಮಹದಾಯಿ ಯೋಜನೆಗಾಗಿ ಪ್ರಲ್ಹಾದ್ ಜೋಶಿ ಅವರ ಬಳಿಯೂ ಪ್ರತ್ಯೇಕವಾಗಿ ಮಾತನಾಡುತ್ತೇನೆ. ಮೇಕೆದಾಟುದಿಂದ ತಮಿಳುನಾಡಿಗೆ ತೊಂದರೆಯಿಲ್ಲ, ಕಬಿನಿ, ಕೆಆರ್‌ಎಸ್ ಮೇಲಿನ ಹೊರೆ ಕಡಿಮೆಯಾಗಿ ಹೆಚ್ಚುವರಿ ನೀರು ಸಂಗ್ರಹಿಸಿ ಅಗತ್ಯದ ವೇಳೆ ತಮಿಳುನಾಡಿಗೆ ಹರಿಸಬಹುದು. ಇದರಿಂದ ಅವರಿಗೇ ಲಾಭ. ನ್ಯಾಯಾಲಯದ ಹೋರಾಟದ ಮೂಲಕ 12 ಸಾವಿರ ಕ್ಯೂಸೆಕ್ಸ್ ಬದಲಿಗೆ 9 ಸಾವಿರ ಕ್ಯೂಸೆಕ್ಸ್‌ಗೆ ಆದೇಶ ಪಡೆದಿದ್ದೇವೆ. ಮುಂದಿನ ಕಲಾಪದಲ್ಲಿ ನೀರು ನಿಲ್ಲಿಸಲು ಶ್ರಮಿಸುತ್ತೇವೆ, ರೈತರ ರಕ್ಷಣೆ ನನ್ನ ಜವಾಬ್ದಾರಿ” ಎಂದು ಹೇಳಿದರು.

ಡ್ಯಾಂಗಳ ವೆಬ್‌ಸೈಟ್ ಹ್ಯಾಕ್ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments