Homeಕರ್ನಾಟಕಬಿಡದಿ ರೈತರ ಮೇಲೆ ಕೊಲೆ ಯತ್ನದ ಆರೋಪ, ಇದು ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ: ಮುಖ್ಯಮಂತ್ರಿ ಚಂದ್ರು

ಬಿಡದಿ ರೈತರ ಮೇಲೆ ಕೊಲೆ ಯತ್ನದ ಆರೋಪ, ಇದು ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ: ಮುಖ್ಯಮಂತ್ರಿ ಚಂದ್ರು

ಬಿಡದಿಯಲ್ಲಿ ತಮ್ಮ ಕುಟುಂಬಗಳ ಪರಂಪರಾಗತ ಆಸ್ತಿಗಳನ್ನು ಉಳಿಸಿಕೊಳ್ಳಲು ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೊಲೆ ಯತ್ನ ಸೇರಿದಂತೆ ಗಂಭೀರ ಪ್ರಕರಣಗಳನ್ನು ದಾಖಲಿಸಿರುವುದು ರಾಜ್ಯ ಸರ್ಕಾರದ ದಮನಕಾರಿ ಮತ್ತು ರೈತ ವಿರೋಧಿ ಮನೋಭಾವವನ್ನು ಬಯಲಿಗೆಳೆದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅವರ ಧ್ವನಿಯನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ, ಬದಲಾಗಿ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರಜಾಪ್ರಭುತ್ವದ ಕಂಠಹರಣ ಮಾಡುತ್ತಿದೆ. ಇದು ಸ್ವತಂತ್ರ ಭಾರತದಲ್ಲಿ ಅಕ್ಷಮ್ಯ ಬೆಳವಣಿಗೆಯಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ಮಾಫಿಯಾ ವ್ಯವಸ್ಥೆಯು, ಬಡ ಮತ್ತು ಮಧ್ಯಮ ವರ್ಗದ ರೈತರನ್ನು ಬೆದರಿಸಿ ಅವರ ಜಮೀನುಗಳನ್ನು ಕಬಳಿಸುವ ಪ್ರಯತ್ನ ನಡೆಸುತ್ತಿದೆ ಎಂಬ ಅನುಮಾನವನ್ನು ಈ ಬೆಳವಣಿಗೆ ಮತ್ತಷ್ಟು ಬಲಪಡಿಸಿದೆ. ಜನರ ಸೇವೆಗಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಂದು ಜನರನ್ನೇ ಅಪರಾಧಿಗಳಂತೆ ಕಾಣುತ್ತಿರುವುದು ದುರಂತ ಎಂದಿದ್ದಾರೆ.

ರೈತರ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸಿರುವುದು, ಹೋರಾಟಗಾರರನ್ನು ಬೆದರಿಸಿ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದ ಭಾಗವಾಗಿದೆ. ರಾಜ್ಯ ಸರ್ಕಾರಕ್ಕೆ ರೈತರ ನೋವು ಅರ್ಥವಾಗುತ್ತಿಲ್ಲ ಎಂದಾದರೆ, ಅದು ಅಧಿಕಾರದ ಮದದಲ್ಲಿ ತೇಲುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ರೈತರ ಮೇಲೆ ದಾಖಲಿಸಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಅಲ್ಲದೆ, ಬಿಡದಿ ರೈತರೊಂದಿಗೆ ನೇರ ಮಾತುಕತೆ ನಡೆಸಿ, ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ, ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ರೈತರ ಪರವಾಗಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವಿಷಯ ಸ್ಪಷ್ಟವಾಗಿರಲಿ – ರೈತರ ಧ್ವನಿಯನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿರುವ ರೈತರ ಜೊತೆಗೆ ಕರ್ನಾಟಕದ ಜನತೆ ನಿಂತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷ ಕೊನೆಯವರೆಗೂ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments