ದೇಶಿಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಅದಕ್ಕೆ ಅತ್ಯಗತ್ಯವಾಗಿ ಬೇಕಿರುವ ಪೂರಕ ವ್ಯವಸ್ಥೆಯ ಭಾಗವಾಗಿರುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉದ್ಯಮದ ಪ್ರಮುಖರ ಜತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ವಿಸ್ತೃತ ಸಮಾಲೋಚನೆ ನಡೆಸಲಾಯಿತು.
ಎಲೆಕ್ಟ್ರಿಕ್ ವಾಹನಗಳ ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ದೇಶದಲ್ಲಿ ದೃಢವಾದ, ನಾವೀನ್ಯತೆಯಿಂದ ಕೂಡಿದ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ಸಚಿವರು ಮಹತ್ವಪೂರ್ಣವಾಗಿ ಚರ್ಚಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು, ದೇಶೀಯ ಚಾರ್ಜಿಂಗ್ ಕೇಂದ್ರಗಳ ನಿರ್ಮಾತೃಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪಾಲುದಾರರು ತಮ್ಮ ಕಾರ್ಯಚಟುವಟಿಕೆಗಳು ಹಾಗೂ ಕೇಂದ್ರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಸಚಿವರ ಗಮನ ಸೆಳೆದರು.
ಸ್ಥಳೀಯ ತಂತ್ರಜ್ಞಾನ, ಉತ್ಪನ್ನ ಅಭಿವೃದ್ಧಿ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಮೇಲಿನ ತಮ್ಮ ದೃಢವಾದ ನಿಲುವನ್ನು ಒತ್ತಿ ಹೇಳಿದರು, ಜತೆಗೆ ಭಾರತವನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ದೃಷ್ಟಿಕೋನದ ಬಗ್ಗೆ ಸಚಿವರು ಉದ್ಯಮದ ಪ್ರಮುಖರಿಗೆ ತಿಳಿಸಿದರು.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮ ಬೆಳೆಯುತ್ತಿರುವ ರೀತಿ, ಆ ಕ್ಷೇತ್ರದ ವಿಕಾಸ, ಅದರ ಆದ್ಯತೆ ಮತ್ತು ಅಗತ್ಯಗಳ ಕುರಿತು ಸಚಿವರು ಆಳವಾದ ಚರ್ಚೆ ನಡೆಸಿದರಲ್ಲದೆ, ದೇಶೀಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಉತ್ಪಾದಿಸುವುದು ಇವತ್ತಿನ ಅಗತ್ಯವಾಗಿದೆ. ಆರಂಭಿಕ ಮಟ್ಟದಲ್ಲಿಯೇ ಇಂಗಾಲ ಹೊರಸೂವಿಕೆಯನ್ನು ಶೂನ್ಯಕ್ಕೆ ತರಬೇಕು ಎಂದು ಸಚಿವರು ಹೇಳಿದರು.
ಉದ್ಯಮದ ಪ್ರಮುಖರು ಪಿಎಂ ಇ ಡ್ರೈವ್ ಯೋಜನೆ (PM E-DRIVE) ಕುರಿತು ತಮ್ಮ ಅಭಿಪ್ರಾಯಗಳನ್ನು ಸಚಿವರೊಂದಿಗೆ ಹಂಚಿಕೊಂಡರಲ್ಲದೆ ಅದರ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಬೇಕು. ಜತೆಗೆ ಉದ್ಯಮದ ಬೆಳೆಯುತ್ತಿರುವ ಅಗತ್ಯತೆಗಳಿಗೆ ಅನುಗುಣವಾಗಿ PLI ಆಟೋ ಯೋಜನೆಯನ್ನು ಪರಿಷ್ಕರಿಸುವ ಅಗತ್ಯತೆಯ ಬಗ್ಗೆಯೂ ಚರ್ಚಿಸಿದರು.
ಸ್ಥಳೀಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ವೇಗಗೊಳಿಸಲು, ದೇಶೀಯ ಮೌಲ್ಯವರ್ಧನೆಯನ್ನು ಬಲಪಡಿಸಲು ಮತ್ತು ಭಾರತದ ಎಲೆಕ್ಟ್ರಿಕ್ ವಾಹನ ರಫ್ತು ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ವೃದ್ಧಿಸುವ ಅವಕಾಶಗಳ ಕುರಿತು ಉದ್ಯಮದ ನಿಯೋಗವು ಸಚಿವರಿಗೆ ವಿವರಿಸಿತು.
ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಾ, ಭಾರತೀಯ ತಯಾರಕರು ಜಾಗತಿಕವಾಗಿ ಆವಿಷ್ಕಾರ, ನಾವೀನ್ಯತೆ ಮತ್ತು ಸ್ಪರ್ಧೆಗೆ ಅನುವು ಮಾಡಿಕೊಡುವ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ನರೇಂದ್ರ ಮೋದಿ ಅವರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನಿಯೋಗದಲ್ಲಿ ಎಥೆರ್ ಎನರ್ಜಿಯ ಸಹ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ, ಮ್ಯಾಟರ್ನ ಸ್ಥಾಪಕ ಮತ್ತು ಸಿಇಒ ಮೋಹಲ್ ಲಾಲ್ಭಾಯ್, ರಿವರ್ನ ಸಹ ಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಮಣಿ, ಯೂಲರ್ ಮೋಟಾರ್ಸ್ನ ಸಂಸ್ಥಾಪಕ ಮತ್ತು ಸಿಇಒ ಸೌರವ್ ಕುಮಾರ್, ರಾಪ್ಟೀ ಎಚ್ವಿಯ ಸಹ ಸಂಸ್ಥಾಪಕ ಮತ್ತು ಸಿಇಒ ದಿನೇಶ್ ಅರ್ಜುನ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು.


