ಜಿಬಿಎ ವ್ಯಾಪ್ತಿಯಲ್ಲಿನ 27 ವಾರ್ಡ್‍ಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಸಮಾನಾಂತರ ಎಸ್‍ಐಆರ್ ಅನ್ನು ತಕ್ಷಣ ನಿಲ್ಲಿಸಬೇಕು ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯದಾದ್ಯಂತ ಎಸ್‍ಐಆರ್ ನಡೆಸುತ್ತಿದೆ. ಇದರ ನಡುವೆ ಜಿಬಿಎ ವಾರ್ಡ್‍ಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತೊಂದು ಎಸ್‍ಐಆರ್ ನಡೆಸುತ್ತಿದೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಕೆಲಸ ಮಾಡುತ್ತಿದೆ. 20 ವರ್ಷಗಳ ನಂತರ ಈ ಎಸ್‍ಐಆರ್ ನಡೆಯುತ್ತಿದ್ದು, ದೇಶದಲ್ಲಿ ಅಕ್ರಮ ಮತದಾರನ್ನು ಗುರುತಿಸಲು, ಮೃತಪಟ್ಟವರ ಹೆಸರು ತೆಗೆಯಲು ಮತ್ತು ಇತರ ಹಲವಾರು ಕಾರಣಗಳಿಂದ ಎಸ್‍ಐಆರ್ ನಡೆಯುತ್ತಿದೆ ಎಂದರು.
ನಗರ ಪ್ರದೇಶಗಳಲ್ಲಿ ಮತದಾರರ ಹೆಸರು ಎರಡು ಕಡೆ ಇರುತ್ತದೆ. ಕೆಲವರು ಬೇರೆ ಕಡೆ ನೆಲೆಸಿರುತ್ತಾರೆ. ಹಳ್ಳಿಗೆ ಹೋಗಿರುತ್ತಾರೆ. ಆದರೆ, ಅವರ ಹೆಸರು ಮತಪಟ್ಟಿಯಲ್ಲಿ ಇರುತ್ತದೆ. ಲೆಕ್ಕಕ್ಕೆ ಇವರು ಇರುತ್ತಾರೆ. ಆದರೆ ಮತ ಚಲಾಯಿಸುವುದಿÀಲ್ಲ. ಇದರಿಂದ ಶೇಕಡಾ ಮತದಾನ ಕಡಿಮೆಯಾಗುತ್ತದೆ, ಇದನ್ನೆಲ್ಲ ತಪ್ಪಿಸಲು ಎಸ್‍ಐಆರ್ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಅಕ್ರಮ ಮತಪಟ್ಟಿ ಸಿದ್ಧತೆ…
ಕರ್ನಾಟಕದಲ್ಲಿ ಅಕ್ರಮ ಮತದಾರರ ಪಟ್ಟಿಯನ್ನು ತಯಾರು ಮಾಡಲು ಸರ್ಕಾರ ಹೊರಟಿದೆ. ಸಿಎಂ ಮೂಗಿನ ನೇರದಲ್ಲಿ ಅಧಿಕಾರಿಗಳು ಅಕ್ರಮವಾಗಿ ಮತದಾರರನ್ನು ಸೇರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಅಲ್ಪಸಂಖ್ಯಾತ ನಾಯಕರು ಅಕ್ರಮವಾಗಿ ಬಾಂಗ್ಲಾದೇಶಿಗಳನ್ನು ರಾಜ್ಯಕ್ಕೆ ಕರೆತಂದಿದ್ದಾರೆ. ಬಾಂಗ್ಲಾದೇಶಿಯರನ್ನು ಕರ್ನಾಟಕದ ವಾಸಿಗಳಾಗಿ ಮಾಡಲು ಮತ್ತು ಮತದಾರರನ್ನಾಗಿ ಮಾಡಲು ಷಡ್ಯಂತ್ರ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗದಲ್ಲಿ ನಲೆಸಿರುವ ಅಕ್ರಮ ಬಾಂಗ್ಲಾದೇಶಿಗಳನ್ನು ಮತಪಟ್ಟಿಗೆ ಸೇರಿಸಿ ಸಕ್ರಮ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಆದ ನಂತರ ಅಲ್ಲಿದ್ದ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬಂದಿದ್ದಾರೆ. ಇವರಲ್ಲಿ ಕೆಲವು ಸಿಕ್ಕಿ ಬಿದ್ದಿದ್ದಾರೆ. ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ಬಿಎಲ್‍ಒಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಅಕ್ರಮ ವಾಸಿಗಳನ್ನು ಮತಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಆರೋಪಿಸಿದರು.
ನಿಯಮ ಉಲ್ಲಂಘಿಸುವ ಬಿಎಲ್‍ಒಗಳು…
ಮಸೀದಿಗಳಲ್ಲಿ, ಶಾದಿ ಮಹಲ್‍ಗಳಲ್ಲಿ, ಕಲ್ಯಾಣ ಮಂಟಪದಲ್ಲಿ ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಅಕ್ರಮ ವಲಸಿಗರಿಗೆ ವಿಳಾಸ ಇಲ್ಲ. ಮನೆ ಸಂಖ್ಯೆ ಇಲ್ಲ. ಆದರೂ ಕಾನೂನು ಉಲ್ಲಂಘಿಸಿ ಅವರ ಹೆಸರನ್ನು ಸೇರಿಸಲಾಗುತ್ತಿದೆ. ಈ ಫಾರಂ ಅನ್ನು ಬಿಎಲ್‍ಒಗಳು ಖುದ್ದಾಗಿ ಮನೆಗಳಿಗೆ ಹೋಗಿ ಕೊಡಬೇಕು ಎಂಬ ನಿಯಮ ಇದೆ. ಆದರೆ ಎಲ್ಲ ನಿಯಮ ಗಾಳಿಗೆ ತೂರಿ ಬಿಎಲ್‍ಒಗಳು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸೈಬರ್ ಕೇಂದ್ರಗಳಲ್ಲಿ ಜನನ ಪ್ರಮಾಣಪತ್ರ…
ರಾಜ್ಯದಲ್ಲಿ ಸೈಬರ್ ಕೇಂದ್ರದಲ್ಲಿ ಅಕ್ರಮವಾಗಿ ಜನನ ಪ್ರಮಾಣ ಪತ್ರ ಕೊಡುತ್ತಿದ್ದಾರೆ. ಎಸ್‍ಐಆರ್ ಆರಂಭವಾದ ನಂತರ ಈ ಜನನ ಪ್ರಮಾಣಪತ್ರ ಕೊಡುವುದು ಹೆಚ್ಚಳವಾಗಿದೆ. ಶಾಶ್ವತ ನಿವಾಸಿ ಪ್ರಮಾಣಪತ್ರ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇಲ್ಲಿ ಹುಟ್ಟಿದವರಿಗೆ, ಬದುಕಿದವರಿಗೆ ಈ ರೀತಿ ಪ್ರಮಾಣಪತ್ರ ಕೊಡಬೇಕಾಗಿಲ್ಲ. ನಮ್ಮ ಮನೆ ಇದೆ. ಮತಪಟ್ಟಿಯಲ್ಲಿ ಹೆಸರಿದೆ. ಅಕ್ರಮ ಬಾಂಗ್ಲಾದೇಶಿಯರಿಗೆ, ಎಲ್ಲಿ ಎಸ್ ಐಆರ್ ನಡೆದಿಲ್ಲ ಅಲ್ಲಿದ್ದ ಅಕ್ರಮ ಜನರನ್ನು ಕರೆದುಕೊಂಡು ಬಂದು ನಿವಾಸಿ ಪ್ರಮಾಣ ಪತ್ರ ಕೊಡಲು ಮುಂದಾಗಿದ್ದೀರಿ ಎಂದರು.
ಬಿಎಲ್‍ಒಗಳು ಗುಂಪಾಗಿ ಜನರನ್ನು ಸೇರಿಸಿ ಎಸ್‍ಐಆರ್ ಮಾಡುವುದು ಸರಿಯಲ್ಲ. ಬಿಎಲ್‍ಒಗಳಿಗೆ ಸರಿಯಾದ ತರಬೇತಿ ನೀಡಿಲ್ಲ. ಮ್ಯಾಪಿಂಗ್ ಮಾಡುತ್ತಿಲ್ಲ. ಅರ್ಜಿಯನ್ನು ಮನೆಗೆ ಬಿಸಾಕಿ ಬರುತ್ತಿದ್ದಾರೆ. ಬಿಎಲ್‍ಒಗಳಿಗೆ ಒತ್ತಡ ಹೇರಲಾಗುತ್ತಿದೆ. ಕಾನೂನು ವಿರೋಧಿ ಕ್ರಮಗಳನ್ನು ತಕ್ಷಣ ರಾಜ್ಯ ಸರ್ಕಾರ ನಿಲ್ಲಿಸಬೇಕು. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಹಾಜರಿದ್ದರು.


