ಕೇರಳದ ಐತಿಹಾಸಿಕ ಶ್ರೀ ನಾರಾಯಣಗುರು ಸ್ಥಾಪಿತ ವರ್ಕಳದ ಶಿವಗಿರಿ ಮಠಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರು ಭೇಟಿ ನೀಡಿ, ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಗಿರಿ ಮಠದ ಮಹಾಗುರುಗಳಾದ ಬ್ರಹ್ಮಶ್ರೀ ಸಚ್ಚೀದಾನಂದ್ ಶ್ರೀ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಮಾಜದಲ್ಲಿ ಸಮಾನತೆ, ಸಹೋದರತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೀ ನಾರಾಯಣ ಗುರುಗಳ ಆದರ್ಶಗಳು ಇಂದಿಗೂ ದೇಶಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟರು.
ಬಳಿಕ ಶಿವಗಿರಿ ಮಠದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತ ಬದುಕು ಮತ್ತು ಸಮಾನ ಅವಕಾಶಗಳು ದೊರೆಯಬೇಕೆಂಬ ಶ್ರೀ ನಾರಾಯಣ ಗುರುಗಳ ಸಂದೇಶವು ಇಂದಿನ ಭಾರತಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.
ಜಾತಿ, ಧರ್ಮ ಮತ್ತು ಭಾಷೆಯ ಭೇದಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರ ಯುವಜನ ಸಭೆಯ ಅಧ್ಯಕ್ಷ ಗೋಪಿಕೃಷ್ಣ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖಂಡರು, ಸ್ಥಳೀಯ ಕಾಂಗ್ರೆಸ್ ನಾಯಕರು, ಶಿವಗಿರಿ ಮಠದ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.


