ಅರಣ್ಯ ಜಮೀನನ್ನು ಅಕ್ರಮವಾಗಿ ಕಂದಾಯ ಜಮೀನನ್ನಾಗಿ ದಾಖಲೆಗಳಲ್ಲಿ ತಿದ್ದಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಕೆ ಆರ್ ಪುರದ ಹಿಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಮೊಕದ್ದಮೆ ದಾಖಲಿಸಿ, ಸಕ್ಷಮ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ದಂಡ ಪ್ರಕ್ರಿಯಾ ಸಂಹಿತೆ ಕಲಂ 197ರ ಅನ್ವಯ ಮಂಜೂರಾತಿ ನೀಡಿ ಸರ್ಕಾರ ಆದೇಶಿಸಿದೆ.
ಕೆ ಆರ್ ಪುರ ಹೋಬಳಿ, ಕೊತ್ತನೂರು ಗ್ರಾಮದ ಸರ್ವೇ ನಂ.47ರಲ್ಲಿ 17-34 ಎಕರೆ/ಗುಂಟೆ ಜಮೀನು “ಅರಣ್ಯ ಭೂಮಿ” ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಸಹ ಹಾಗೂ ಸದರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರವಾಗಿರುವುದು ದಾಖಲೆಯಲ್ಲಿ ಇದ್ದರೂ ಸಹ, ಅದನ್ನು ರದ್ದು ಪಡಿಸಿ, ಕಂದಾಯ ಭೂಮಿಯನ್ನಾಗಿ ಅಕ್ರಮವಾಗಿ ಪರಿವರ್ತಿಸಿರುವ ಆರೋಪ ಅಜಿತ್ ಕುಮಾರ್ ರೈ ಮೇಲೆ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ರೈ ವಿರುದ್ಧ ಮೊಕದ್ದಮೆ ದಾಖಲಿಸಿ, ಸಕ್ಷಮ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಮಂಜೂರಾತಿ ನೀಡುವಂತೆ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರ್ಕಾರಕ್ಕೆ ಕೋರಿದ್ದರು.
ಅಕ್ರಮವಾಗಿ ದಾಖಲಾತಿ ತಿದ್ದುಪಡಿ
ಕೆ ಆರ್ ಪುರ ಹೋಬಳಿ, ಕೊತ್ತನೂರು ಗ್ರಾಮದ ಸ.ನಂ:47ರಲ್ಲಿ 17-34 ಎಕರೆ/ಗುಂಟೆ ಜಮೀನನ್ನು ಬೆಂಗಳೂರು ನಗರ ಜಿಲ್ಲಧಿಕಾರಿಗಳು 25.01.2000 ಆದೇಶದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಅದರಂತೆ, ಪಹಣಿ ಹಾಗೂ ಇತರೆ ಕಂದಾಯ ದಾಖಲೆಗಳಲ್ಲಿ ‘ಅರಣ್ಯ’ ಎಂದು ದಾಖಲಾಗಿರುತ್ತದೆ.
ಕೆ ಆರ್ ಪುರ ತಹಶೀಲ್ದಾರ್ ಹುದ್ದೆಯಲ್ಲಿದ್ದಾಗ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಮನೆ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಕಳೆದ ಜೂನ್‌ನಲ್ಲಿ ದಾಳಿ ಮಾಡಿದ್ದರು.
ಲೋಕಾಯುಕ್ತ ದಾಳಿ ವೇಳೆ ಅಜಿತ್ ಕುಮಾರ್ ರೈ ಬಳಿ 500 ಕೋಟಿ ರೂ. ಆಸ್ತಿ ಪತ್ತೆಯಾಗಿತ್ತು. ಸಹಕಾರ ನಗರದ ಮನೆಯಲ್ಲಿ 750 ಗ್ರಾಂ ಚಿನ್ನಾಭರಣ, ದುಬಾರಿ ಬೆಲೆಯ ಮೂರು ರ‍್ಯಾಡೋ ವಾಚ್, ವಿದೇಶಿ ಬ್ರಾಂಡ್‌ನ ಸುಮಾರು 50 ವಾಚ್ ಜಪ್ತಿ ಮಾಡಲಾಗಿತ್ತು. ಬೆಂಗಳೂರಿನ ಆಸುಪಾಸಿನಲ್ಲಿ 200 ಎಕರೆಗೂ ಹೆಚ್ಚು ಜಮೀನನ್ನು ಬೇನಾಮಿ ಆಸ್ತಿ ಮಾಡಿಕೊಂಡಿದ್ದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ.
ಅನುಕಂಪದಲ್ಲಿ ಸರ್ಕಾರಿ ಹುದ್ದೆ ಪಡೆದಿದ್ದ ಅಜಿತ್ ರೈ
ಅಜಿತ್ ರೈ ತಂದೆ ಪುತ್ತೂರಿನಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ತಂದೆ ತೀರಿಕೊಂಡಿದ್ದರು ಎಂಬ ಕಾರಣಕ್ಕೆ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಅಜಿತ್ ರೈಗೆ ಕೆಲಸ ನೀಡಲಾಗಿತ್ತು. ಅಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ ಅಜಿತ್, ಬಳಿಕ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದ. ಈ ಹಿಂದೆಯೂ ಅಜಿತ್ ರೈ ಕೆಆರ್ ಪುರ ತಹಶೀಲ್ದಾರ್ ಆಗಿದ್ದಾಗ ಅಮಾನತುಗೊಂಡಿದ್ದ. ಹಿಂದೆ ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಅಜಿತ್ ಕುಮಾರ್ ರೈನನ್ನು ಸರ್ಕಾರ 2022, ನವೆಂಬರ್ ತಿಂಗಳಲ್ಲಿ ಅಮಾನತು ಮಾಡಿತ್ತು.