- 2028ಕ್ಕೂ ಕಾಂಗ್ರೆಸ್ ಗ್ಯಾರಂಟಿ ಅಲೆ; ವಿಧಾನ ಪರಿಷತ್ ಚುನಾವಣಾ ಗೆಲುವು ಮುಂದಿನ ಚುನಾವಣಾ ದಿಕ್ಸೂಚಿ
- ಜನರನಾಡಿ ಮಿಡಿತ ಅರಿತ ರಾಜ್ಯದ ಜನಪ್ರತಿನಿಧಿಗಳು ತಮ್ಮ ಪಕ್ಷದ ಗಡಿ ಮೀರಿ ಕಾಂಗ್ರೆಸ್ ನೀತಿಗಳಿಗೆ ಜೈಕಾರ
ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಐತಿಹಾಸಿಕವಾಗಿದ್ದು, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿರುವ ಜನ ಕಲ್ಯಾಣ ಮತ್ತು ನ್ಯಾಯ (NYAY) ರಾಜಕೀಯಕ್ಕೆ ನಿಸ್ಸಂಶಯ ಜಯ ಸಿಕ್ಕಿದ ಸಂದೇಶವನ್ನು ಸಾರಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಪಕ್ಷದ ಕಚೇರಿಯಲ್ಲಿ ಪರಿಷತ್ ಚುನಾವಣೆಯಲ್ಲಿ ಗೆದ್ದ ಐವರು ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 135 ಶಾಸಕರನ್ನು ಹೊಂದಿದೆ ಮತ್ತು ಇನ್ನೂ 3 ಎಸ್‌ಕೆಪಿ + ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಒಟ್ಟು 138 ಶಾಸಕರ ಬಲ ಹೊಂದಿದೆ. ಹೀಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗಳಿಗೆ 151 ಪ್ರಥಮ ಪ್ರಾಶಸ್ತ್ಯದ ಮತಗಳು ಲಭಿಸಿವೆ” ಎಂದರು.
“ಕರ್ನಾಟಕದ ರಾಜಕೀಯ ಇಂದು ಎರಡು ಧ್ರುವಗಳ ಸುತ್ತ ಸುತ್ತುತ್ತಿದೆ. ಒಂದು ಧ್ರುವವೆಂದರೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು. ಈ ಯೋಜನೆಗಳ ಮೂಲಕ ವರ್ಷಕ್ಕೆ ₹56,000 ಕೋಟಿಗೂ ಅಧಿಕ ಹಣವನ್ನು ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ” ಎಂದು ಹೇಳಿದರು.
“ಇನ್ನೊಂದು ಧ್ರುವವೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿ. ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗೆ ಕಟು ವಿರೋಧ ವ್ಯಕ್ತಪಡಿಸುತ್ತಿರುವ ಅವರು, ಅವುಗಳನ್ನು ರದ್ದುಪಡಿಸಲು ಬಯಸುತ್ತಾರೆ. ಅವರ ರಾಜಕೀಯ ಜಾತಿ ವಿಭಜನೆ ಮತ್ತು ಧಾರ್ಮಿಕ ಧ್ರುವೀಕರಣದ ಸುತ್ತ ಕೇಂದ್ರೀಕೃತವಾಗಿದೆ” ಎಂದರು.
“ಜನರನಾಡಿ ಮಿಡಿತ ಅರಿತ ಕರ್ನಾಟಕದ ಶಾಸಕರು ಇಂದು ತಮ್ಮ ಪಕ್ಷದ ಗಡಿಗಳನ್ನು ಮೀರಿ ಕಾಂಗ್ರೆಸ್ ಸರ್ಕಾರದ ನೀತಿಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮತ ಚಲಾಯಿಸುವ ಮೂಲಕ ತಮ್ಮ ಮುದ್ರೆ ಒತ್ತಿದ್ದಾರೆ. ಇದು 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆಯ ದಿಕ್ಸೂಚಿ” ಎಂದು ಹೇಳಿದರು.


