ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯದ ನಗೆ ಬೀರಿದ್ದಾರೆ.
ಎಚ್.ವೈ. ಮೇಟಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದಿದ್ದ ಬೈ ಎಲೆಕ್ಷನ್ ನಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ, ಎದುರಿಸಿದ್ದ ಮೊದಲ ಚುನಾವಣೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ವಿಜಯ ಪತಾಕೆ ಹಾರಿಸಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ 21,866 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಜಯ ಸಾಧಿಸಿದ್ದಾರೆ. ನವನಗರದ ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ನಡೆಯಿತು. ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ 3,207 ಮತಗಳ ಮುನ್ನಡೆ ಸಾಧಿಸಿದ್ದಾರೆ. ಉಮೇಶ ಮೇಟಿ ಅವರಿಗೆ 6,106 ಮತಗಳು ಬಿದ್ದಿದ್ದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 2, 899 ಮತ ಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ ಪೈಪೋಟಿ ನೀಡಿದ್ದರಾದರೂ ಅಂತಿಮವಾಗಿ ಸೋಲುಂಡಿದ್ದಾರೆ. ಹೆಚ್.ವೈ. ಮೇಟಿ ನಿಧನದ ಹಿನ್ನೆಲೆ ಅವರ ಕುಟುಂಬಕ್ಕೇ ಟಿಕೆಟ್ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್, ಮೇಟಿ ಪುತ್ರ ಉಮೇಶ್ರನ್ನು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ್ ಮೇಟಿ ಅಂತಿಮವಾಗಿ ಗೆದ್ದು ಬೀಗಿದ್ದಾರೆ.
ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಜಯಭೇರಿ ಸಂಬಂಧ ಅವರ ಸಹೋದರ ಮಲ್ಲಿಕಾರ್ಜುನ ಮೇಟಿ ಮಾಧ್ಯಮಗಳ ಜೊತೆ ಮಾತನಾಡಿ, “ಇದೊಂದು ಭಾವುಕ ಕ್ಷಣವಾಗಿದ್ದು, ಈ ಗೆಲುವಿನಿಂದ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಕ್ಕ ಹಾಗಾಗಿದೆ. ನಮ್ಮ ತಂದೆ ಕೈ ಹಿಡಿದಿದ್ದ ಜನರು ಈಗ ನಮ್ಮ ಸಹೋದರನ ಕೈಯನ್ನೂ ಹಿಡಿದಿದ್ದಾರೆ. ಸಿಎಂ, ಸಚಿವರು ಮತ್ತು ಮತದಾರರಿಗೆ ಧನ್ಯವಾದ ಹೇಳುವೆ” ಎಂದು ಅವರು ತಿಳಿಸಿದ್ದಾರೆ.


