ರಾಜ್ಯ ಸರ್ಕಾರವು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಒಳಮೀಸಲಾತಿ ಅನುಷ್ಠಾನದ ತೀರ್ಮಾನವನ್ನು ಕರ್ನಾಟಕ ಮಾದರ ಮಹಾಸಭಾ ಅಧ್ಯಕ್ಷರು ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.
“ಇದು ಕೇವಲ ಒಂದು ತೀರ್ಮಾನ ಅಲ್ಲ… ಇದು ನಾಲ್ವತ್ತು ವರ್ಷಗಳ ನೋವು, ಹೋರಾಟದ ಗೆಲುವು,” ಎಂದು ಅವರು ಮನಸ್ಸು ಮುಟ್ಟುವಂತೆ ತಿಳಿಸಿದ್ದಾರೆ.
ಗ್ರೂಪ್ ಎ ಗೆ 5.25%, ಗ್ರೂಪ್ ಬಿ ಗೆ 5.25% ಹಾಗೂ ಗ್ರೂಪ್ ಸಿ ಗೆ 4.5% ಒಳಮೀಸಲಾತಿ ಹಂಚಿಕೆ ಮಾಡುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ದಾರಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದು ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳ ಬಹುದಿನದ ಬೇಡಿಕೆಗೆ ನ್ಯಾಯ ಒದಗಿಸಿದ ಐತಿಹಾಸಿಕ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ.
“ಚಿತ್ರದುರ್ಗದ ಪರಿಶಿಷ್ಟ ಜಾತಿಯ ಮಹಾಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ಹಾಗೂ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಮಾತಿನಂತೆ ಇಂದು ಆ ಭರವಸೆ ಈಡೇರಿದೆ. ಮಾತು ಕೊಟ್ಟರೆ ನೆರವೇರಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ 12ನೇ ಶತಮಾನದಲ್ಲಿ ಬಸವಣ್ಣವರು ನಡೆಸಿದ ಸಮಾನತೆ ಚಳುವಳಿಯ ಸ್ಪೂರ್ತಿಯಿಂದ ಈ ತೀರ್ಮಾನ ಕಾರ್ಯರೂಪಕ್ಕೆ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. “ಇಂದು ತೆಗೆದುಕೊಂಡ ಈ ನಿರ್ಧಾರ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಹತ್ವದ ಕ್ಷಣ,” ಎಂದರು.
ಮಾನ್ಯ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಿತ್ರದುರ್ಗದ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ನಮ್ಮ ಸರ್ಕಾರವು ಒಳಮೀಸಲಾತಿ ಅನುಷ್ಠಾನದಲ್ಲಿ ನುಡಿದಂತೆ ನಡೆದಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ (ಕೆಪಿಸಿಸಿ ಅಧ್ಯಕ್ಷರು) ಹಾಗೂ ಪ್ರಣಾಳಿಕೆ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರ ಬೆಂಬಲ ಮತ್ತು ಮಾರ್ಗದರ್ಶನ, ಹಾಗು ಸಚಿವರಾದ ಎಚ್.ಕೆ. ಪಾಟೀಲ್, ಹೆಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಪ್ರಿಯಾಂಕ ಖರ್ಗೆ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳ ಸಮನ್ವಯದಿಂದ ಈ ಐತಿಹಾಸಿಕ ನಿರ್ಧಾರ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಾವೆಲ್ಲರೂ ಒಂದೇ ಕುಟುಂಬ… ಅಣ್ಣ-ತಮ್ಮಂದಿರು. ನಮ್ಮ ಪಾಲನ್ನು ನಾವು ಹಂಚಿಕೊಂಡಿದ್ದೇವೆ. ಭಿನ್ನಾಭಿಪ್ರಾಯಗಳಿಗೆ ಜಾಗ ಇಲ್ಲ. ಒಗ್ಗಟ್ಟಿನಿಂದ ಮುಂದೆ ಸಾಗೋಣ,” ಎಂದು ಅವರು ಮನವಿ ಮಾಡಿದ್ದಾರೆ.
ನಾಲ್ವತ್ತು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದ ಹೋರಾಟಗಾರರು, ಚಿಂತಕರು ಹಾಗೂ ತಮ್ಮ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಿ, “ಈ ಜಯ ಅವರ ತ್ಯಾಗದ ಫಲ,” ಎಂದು ಅವರು ಗೌರವ ನಮನ ಸಲ್ಲಿಸಿದ್ದಾರೆ.
“ಇದು ಅಂತ್ಯ ಅಲ್ಲ… ಇದು ಒಂದು ಹೊಸ ಆರಂಭ. ಸಮಾನತೆ, ಗೌರವ ಮತ್ತು ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರಿಯಬೇಕು,” ಉತ್ತಮ ಶಿಕ್ಷಣವನ್ನು ಪಡೆದು ಸರ್ಕಾರದ ಉದ್ಯೋಗ, ಶಿಕ್ಷಣ,ಮತ್ತಿತರ ಅವಕಾಶಗಳನ್ನು ಪಡೆಯಲು ಸಮುದಾಯ ಜಾಗೃತಿ ಹೊಂದಬೇಕು ಅವರು ಕರೆ ನೀಡಿದ್ದಾರೆ.


