ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ದಿನೇದಿನೇ ಗಂಭೀರವಾಗುತ್ತಿದ್ದು, ಅಮೆರಿಕಾ ನೌಕಾ (ಬ್ಲಾಕೇಡ್) ದಿಗ್ಬಂಧನ ಮುಂದುವರಿಸಿದರೆ ಜಾಗತಿಕವಾಗಿ ಅತ್ಯಂತ ಪ್ರಮುಖ ಸಾಗರ ಮಾರ್ಗವಾದ ಸ್ಟ್ರೇಟ್ ಆಫ್ ಹೋರ್ಮುಜ್ ಅನ್ನು ಮತ್ತೆ ಬಂದ್ ಮಾಡುವುದಾಗಿ ಇರಾನ್ ಎಚ್ಚರಿಕೆನೀಡಿದೆ.
ಲೆಬನಾನ್‌ನಲ್ಲಿ ನಡೆದ ಕದನ ವಿರಾಮ ಒಪ್ಪಂದದ ಬಳಿಕ ಈ ಮಾರ್ಗವನ್ನು ಪುನಃ ತೆರೆಯಲಾಗಿದ್ದರೂ, ಹೊಸ ಬೆಳವಣಿಗೆಗಳು ಮತ್ತೆ ಆತಂಕದ ವಾತಾವರಣ ಸೃಷ್ಟಿಸಿವೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಒಪ್ಪಿಸಲು ಸಮ್ಮತಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ತಕ್ಷಣವೇ ತಳ್ಳಿಹಾಕಿದ ಇರಾನ್, ಪರಮಾಣು ಶಸ್ತಾಸ್ತ್ರ ಕುರಿತ ಆಗ್ರಹದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಚಾರವೇ ಇದೀಗ ಎರಡು ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, ಅಮೆರಿಕಾ ನೌಕಾಪಡೆಯು ಇರಾನ್ ಬಂದರುಗಳಿಗೆ ಹೋಗುವ ಹಡಗುಗಳನ್ನು ತಡೆಯುವ ಕ್ರಮ ಕೈಗೊಂಡರೆ, ಸ್ಟ್ರೇಟ್ ಆಫ್ ಹೋರ್ಮುಜ್ ತೆರೆಯಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಾರ್ಗ ತೆರೆಯುವುದು ಅಥವಾ ಮುಚ್ಚುವುದು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಧಾರವಾಗುವುದಿಲ್ಲ, ನೆಲದ ಪರಿಸ್ಥಿತಿಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಅಗತ್ಯವಾದ ಪ್ರತಿಕ್ರಿಯೆ ನೀಡಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿವೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಘಾಈ ಅಮೆರಿಕಾ ತಡೆ ಕ್ರಮವನ್ನು ಯುದ್ಧ ವಿರಾಮದ ಉಲ್ಲಂಘನೆ ಎಂದು ಕರೆದಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.


