Homeಕರ್ನಾಟಕಏ.17ರಂದು ದೆಹಲಿಯಲ್ಲಿ ದೇಶದ ಅತಿದೊಡ್ಡ ರಾಜತಾಂತ್ರಿಕ ನಾವೀನ್ಯತಾ ಸಮಾಲೋಚನೆ: ಪ್ರಿಯಾಂಕ್ ಖರ್ಗೆ

ಏ.17ರಂದು ದೆಹಲಿಯಲ್ಲಿ ದೇಶದ ಅತಿದೊಡ್ಡ ರಾಜತಾಂತ್ರಿಕ ನಾವೀನ್ಯತಾ ಸಮಾಲೋಚನೆ: ಪ್ರಿಯಾಂಕ್ ಖರ್ಗೆ

ಜಾಗತಿಕ ನಾವೀನ್ಯತಾ ಪರಿಸರದಲ್ಲಿ ಭಾರತದ ಪ್ರವೇಶಕ್ಕೆ ಹೆಬ್ಬಾಗಿಲಿನಂತೆ ಕರ್ನಾಟಕ ರಾಜ್ಯವು ಹೊರಹೊಮ್ಮಿದ್ದು, ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ರಾಜ್ಯ ಸರ್ಕಾರವು ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ-2.0)- ಎರಡನೆ ಆವೃತ್ತಿಯನ್ನು ದೆಹಲಿಯಲ್ಲಿ ನಡೆಯಲಿರುವ ರಾಜತಾಂತ್ರಿಕರ ಜೊತೆಗಿನ ಸಂವಾದ ಸಮಾವೇಶದಲ್ಲಿ ಅನಾವರಣ ಮಾಡಲಿದೆ.

ಏ.17ರಂದು ನವದೆಹಲಿಯಲ್ಲಿ ಬ್ರಿಡ್ಜ್‌ ಬೆಂಗಳೂರು- 2026 – ರಾಜತಾಂತ್ರಿಕರ ಜತೆ ಸಮಾಲೋಚನೆ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತೆ ಕ್ಷೇತ್ರವಾರು ಸಹಭಾಗಿತ್ವ ಸಾಧಿಸುವಿಕೆ, ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ಇನ್ನಷ್ಟು ರಚನಾತ್ಮಕ ಮತ್ತು ಎದ್ದಿಕಾಣುವಂತಹ ಪ್ರತಿಫಲಗಳನ್ನು ನೀಡುವಂತಹ ಸಹಭಾಗಿತ್ವಕ್ಕೆ ಮುಂದಾಗಿದೆ.

ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಬಗ್ಗೆ ಮಾಹಿತಿ ನೀಡಿದರು.

ʼಕಳೆದ ಒಂದು ವರ್ಷದಿಂದ ನಾವು ಜಾಗತಿಕ ಕಂಪನಿಗಳ ಜೊತೆಗೆ ಮೈತ್ರಿ ಸಹಭಾಗಿತ್ವ ಸಾಧಿಸುವ ದಿಸೆಯಲ್ಲಿ ಮತ್ತು ಪ್ರತಿಫಲ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಈ ಯೋಜನೆಗಳು ಈಗಾಗಲೇ ಸಾಕಷ್ಟು ಫಲ ನೀಡಿವೆ. ಜಾಗತಿಕ ನಾವೀನ್ಯತಾ ಮೈತ್ರಿಕೂಟದ ನೆರವಿನೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಇನ್ನಷ್ಟು ರಹದಾರಿಗಳನ್ನು ಸೃಷ್ಟಿಸುತ್ತಿದ್ದು, ರಾಜ್ಯದ ಕಂಪನಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಕಲ್ಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆʼ ಎಂದರು.

ಮುಂದಿನ ಒಂದು ದಶಕದಲ್ಲಿ ರಾಜ್ಯವು ಡೀಪ್‌ ಟೆಕ್‌ ಕ್ಷೇತ್ರದಲ್ಲಿ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಬೇಕೆಂಬ ಕನಸನ್ನು ನನಸು ಮಾಡುವ ದಿಸೆಯಲ್ಲಿ ರಾಜ್ಯ ಸರ್ಕಾರವು ಸಂಶೋಧನೆ ಮತ್ತು ಪ್ರತಿಭೆಗಳನ್ನು ಜೋಡಿಸುವ ಕೆಲಸದಲ್ಲಿ ನಿರತವಾಗಿದೆ. ಫಲಿತಾಂಶ ಆಧಾರಿತ ಮತ್ತು ಹೊಸದಾಗಿ ಹೊರಹೊಮ್ಮುತ್ತಿರುವ ಕ್ಷೇತ್ರಗಳೊಂದಿಗೆ ಹಳೆಯ ಉದ್ದಿಮೆಗಳನ್ನು ಜೋಡಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆʼ ಎಂದು ತಿಳಿಸಿದರು.

ವಿಶೇಷತೆ ಏನು?

40ಕ್ಕೂ ಹೆಚ್ಚು ದೇಶಗಳು, 2000ಕ್ಕಿಂತ ಅಧಿಕ ನವೋದ್ಯಮಗಳ ಬೆಂಬಲ ಹಾಗೂ 60ಕ್ಕೂ ಅಧಿಕ ಜಾಗತಿಕ ಮಟ್ಟದ ಒಡಂಬಡಿಕೆ ಪತ್ರಗಳು (ಎಂಒಯು) ಹಾಗೂ ಬೇರೆ ಬೇರೆ ಕಂಪನಿಗಳ ಜೊತೆಗಿನ ಸಹಕಾರದೊಂದಿಗೆ ಕರ್ನಾಟಕ ಸರ್ಕಾರವು ಜಾಗತಿಕ ನಾವೀನ್ಯತಾ ಮೈತ್ರಿಕೂಟದಲ್ಲಿ ಭಾರತದ ಅತ್ಯಂತ ಸುಸಜ್ಜಿತ ಮತ್ತು ದೂರದೃಷ್ಟಿಯ ಯೋಜನೆಗಳೊಂದಿಗೆ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ.

ಜಾಗತಿಕ ಮಟ್ಟದಲ್ಲಿ ಪ್ರಥಮ ಎಂದು ಹೇಳುವ ರೀತಿಯಲ್ಲಿ ರೂಪಿಸಲಾಗಿರುವ ರಾಜ್ಯ ಸರ್ಕಾರದ -ಸರ್ಕಾರದಿಂದ ಸರ್ಕಾರದ ಜತೆಗಿನ ಸಹಕಾರ ಮೈತ್ರಿ ಯೋಜನೆಯು ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಜತೆಗೆ ನವೋದ್ಯಮಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕ್ಷೇತ್ರದಲ್ಲಿ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಯ ಜತೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಸೇತುವಾಗಿ ರಾಜ್ಯ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ.

ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರವು ನಮ್ಮ ಪಾಲುದಾರ ದೇಶಗಳ ಜತೆಗೆ ಕರ್ನಾಟಕದ ನವೋದ್ಯಮ ಪರಿಸರವನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿ 5 ಜಿಐಎ ವೆಬಿನಾರ್‌ಗಳನ್ನು ನಡೆಸುವ ಮೂಲಕ ಜಾಗತಿಕ ಮಟ್ಟದ ತಜ್ಞರು ಮತ್ತು ಪರಿಣತರ ಜ್ಞಾನದ ಪರಸ್ಪರ ಹಂಚಿಕೆಯನ್ನು ಮಾಡಿಕೊಡುವ ಕೆಲಸಕ್ಕೆ ಮುಂದಾಗಿದೆ. ಜಗತ್ತಿನ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪೂರ, ಬೆಲ್ಚಿಯಂ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಜಪಾನ್ ಸೇರಿದಂತೆ ಒಟ್ಟು 9 ದೇಶಗಳೊಂದಿಗೆ ಮಾರುಕಟ್ಟೆ ಆಧಾರಿತ ಯೋಜನೆಗಳನ್ನು ಕೈಗೊಂಡು ನವೋದ್ಯಮಿಗಳಿಗೆ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಣೆಗೆ ನೆರವಾಗಿದೆ.

ಈ ಕಾರ್ಯಕ್ರಮಗಳು ಡೀಪ್ ಟೆಕ್, ಫಿನ್‌ಟೆಕ್, ಹೆಲ್ತ್‌ಟೆಕ್‌, ಕ್ಲೀನ್ ಟೆಕ್, ಬಯೋಟೆಕ್ ಮತ್ತು ಟ್ರಾವೆಲ್‌ಟೆಕ್ ಕ್ಷೇತ್ರಗಳಲ್ಲಿ ಜಾಗತಿಕ ಹೂಡಿಕೆದಾರರು, ಕಾರ್ಪೋರೇಟ್ ಸಂಸ್ಥೆಗಳು, ಮತ್ತು ನಿಯಂತ್ರಣಾ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸಂಪರ್ಕ ಸೇತುವೆಯನ್ನು ಕಲ್ಪಿಸಲು ನೆರವಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಈ ದಿಸೆಯಲ್ಲಿ ಜಾಗತಿಕ ಸಂಸ್ಥೆಗಳಾದ ಲಂಡನ್ನಿನ ಇಂಪೀರಿಯಲ್ ಕಾಲೇಜು, ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ, ರೈಸ್ ವಿಶ್ವವಿದ್ಯಾಲಯ, ಗ್ಲಾಸ್ಗೋ ವಿಶ್ವವಿದ್ಯಾಲಯ, ಲಾ ಟ್ರೋಬ್ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳ ಜತೆ ರಾಜ್ಯ ಸರ್ಕಾರವು ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕುವ ಮೂಲಕ ಅವರ ತಾಂತ್ರಿಕ ನೆರವನ್ನು ಪಡೆದುಕೊಳ್ಳಲು ಮುಂದಾಗಿದೆ.

2025ರಲ್ಲಿ ನಡೆದ ವಿವಾ ಟೆಕ್ ಸಮ್ಮೇಳನದಲ್ಲಿ ಯುರೋಪ್- ಬೆಂಗಳೂರು ಮಧ್ಯೆ ನಾವೀನ್ಯತಾ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದೇ ರೀತಿ ಬರುವ ಏಪ್ರಿಲ್ 2027ರಲ್ಲಿ ಬೆಂಗಳೂರಿನಲ್ಲಿ ಜಿಟೆಕ್ಸ್ ಏಐ ಇಂಡಿಯಾ- ಜಾಗತಿಕ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನುರ್ನ್ಬದ ಮೆಸ್ಸೆ ಇಂಡಿಯಾ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು ಬೆಂಗಳೂರು ಟೆಕ್ ಶೃಂಗದ ಜತೆ ಜತೆಗೆ ಇದು ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಇವೆಲ್ಲ ಕಾರ್ಯಕ್ರಮಗಳ ಫಲವಾಗಿ ರಾಜ್ಯಕ್ಕೆ ಸುಮಾರು ₹ 5,500 ಕೋಟಿ ಮೊತ್ತದ ಜಾಗತಿಕ ಬಂಡವಾಳವು ಹರಿದು ಬರಲಿದ್ದು ಸುಮಾರು 7200 ಉದ್ಯೋಗಗಳು ಸೃಷ್ಟಿಯಾಗಲಿವೆ. ₹ 6350 ಕೋಟಿ ಬಂಡವಾಳವು ಡಾಟಾ ಕೇಂದ್ರಗಳ ಸ್ಥಾಪನೆಗೆ ಹೂಡಿಕೆಯಾಗಲಿವೆ.

ಕರ್ನಾಟಕ ಸರ್ಕಾರವು ಏಪ್ರಿಲ್ 17ರಂದು ನವದೆಹಲಿಯಲ್ಲಿ ಬ್ರಿಡ್ಜ್‌ ಟು ಬೆಂಗಳೂರು- 2026 – ರಾಜತಾಂತ್ರಿಕರ ಜತೆ ಸಮಾಲೋಚನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಅಲ್ಲದೇ ಕಿರಣ್ ಮಜುಂದಾರ್ ಷಾ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿಯ ಈ ಸಮಾವೇಶವು ಬೆಂಗಳೂರಿನಲ್ಲಿ ಬರುವ ನವೆಂಬರ್ 17ರಿಂದ 19ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments