Homeಕರ್ನಾಟಕಗ್ರಾ.ಪಂ. ತೆರಿಗೆ ಸಂಗ್ರಹ |1560.76 ಕೋಟಿ ರೂ. ದಾಖಲೆ ಕರ ಸಂಗ್ರಹ: ಸಚಿವ ಪ್ರಿಯಾಂಕ್‌ ಖರ್ಗೆ

ಗ್ರಾ.ಪಂ. ತೆರಿಗೆ ಸಂಗ್ರಹ |1560.76 ಕೋಟಿ ರೂ. ದಾಖಲೆ ಕರ ಸಂಗ್ರಹ: ಸಚಿವ ಪ್ರಿಯಾಂಕ್‌ ಖರ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ರಾಜ್ಯದ 5943 ಗ್ರಾಮಪಂಚಾಯತಿಗಳ ತೆರಿಗೆ ಸಂಗ್ರಹಿಸುವಲ್ಲಿ ಈ ವರ್ಷ ಕಳೆದ ಸಾಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಡೀಕರಣ ಮಾಡುವ ಮೂಲಕ ಸತತವಾಗಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಡೀಕರಣದಲ್ಲಿ ಕರ್ನಾಟಕ ರಾಜ್ಯವು ಕಳೆದ ವರ್ಷ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಹೇಳಿರುವ ಸಚಿವರು ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹಣೆಯಲ್ಲಿ ಉಂಟಾಗಿರುವ ಪ್ರಗತಿಯು ದಕ್ಷ ಆಡಳಿತ, ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿ ಮತ್ತು ಸುಧಾರಿತ ತೆರಿಗೆ ಸಂಗ್ರಹಣಾ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

2024-25ನೇ ಆರ್ಥಿಕ ವರ್ಷದಲ್ಲಿ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯತಿಗಳು 1272.54 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಮೂಲಕ ಚಾಲ್ತಿ ಬೇಡಿಕೆಯ ಶೇ 80ರಷ್ಟು ತೆರಿಗೆ ವಸೂಲಿ ಮಾಡಿ ದಾಖಲೆ ಮಾಡಿತ್ತು, 2025-26ನೇ ಸಾಲಿನಲ್ಲಿ 1382.57 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, 2024-25ನೇ ಸಾಲಿಗಿಂತ ರೂ. 110.04 ಕೋಟಿ ಅಧಿಕ ತೆರಿಗೆ ವಸೂಲಿ ಮಾಡಿದಂತಾಗಿದೆ, ಆ ಮೂಲಕ ಚಾಲ್ತಿ ಸಾಲಿನ ಬೇಡಿಕೆಯ ಶೇ 89 ರಷ್ಟು ದಾಖಲೆಯ ತೆರಿಗೆ ಸಂಗ್ರಹಿಸಲಾಗಿದೆ ಎಂಬ ವಿವರಗಳನ್ನು ಸಚಿವ ಪ್ರಿಯಾಂಕ್‌ ಖರ್ಗೆ ನೀಡಿದ್ದಾರೆ.

ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳು, ತೆರಿಗೆ ವಸೂಲಾತಿ ಅಭಿಯಾನಗಳ ಮೂಲಕ ನಿರಂತರ ಶ್ರಮ ವಹಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿ ದಾಖಲೆ ಮಾಡಲಾಗಿರುತ್ತದೆ. ಗ್ರಾಮ ಪಂಚಾಯತಿ ಬಿಲ್‌ ಕಲೆಕ್ಟರ್‌ಗಳಿಂದ ಆರಂಭಿಸಿ ಎಲ್ಲಾ ಅಧಿಕಾರಿಗಳ ಶ್ರಮದಿಂದ ಈ ಫಲಿತಾಂಶ ಸಾದ್ಯವಾಗಿದೆ ಎಂದು ಹೇಳಿರುವ ಸಚಿವರು ನೌಕರರು ಹಾಗೂ ಅಧಿಕಾರಿಗಳ ವೃಂದವನ್ನು ಅಭಿನಂದಿಸಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಿಂದ ಕರ ಸಂಗ್ರಹಣೆಯಲ್ಲಿ ಏರುಮುಖ ಕಾಣಬಹುದಾಗಿದೆ ಎಂದಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಂಗ್ರಹವಾದ ಪ್ರತಿಯೊಂದು ರೂಪಾಯಿಯೂ ಹಳ್ಳಿಗಳಲ್ಲಿನ ಸಾರ್ವಜನಿಕ ಕಾಮಗಾರಿಗಳು, ಉತ್ತಮ ಸೇವೆಗಳು ಮತ್ತು ಸ್ಥಳೀಯ ಅಭಿವೃದ್ಧಿಗಾಗಿ ಮರಳಿ ವಿನಿಯೋಗವಾಗುತ್ತಿದೆ. ಇದು ಗ್ರಾಮೀಣ ಭಾಗದ ಸರ್ವತೋಮುಖ ಪ್ರಗತಿಗೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.

ರಾಯಚೂರು ಜಿಲ್ಲೆ ಶೇ.129ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ವಿಕ್ರಮ ಸಾಧಿಸಿದೆ, ರಾಜ್ಯದ 11 ಜಿಲ್ಲೆಗಳು ಶೇಕಡ 100ಕ್ಕಿಂತಲೂ ಹೆಚ್ಚು ಕರ ಸಂಗ್ರಹಿಸುವ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments