ವಿಜಯಪುರದಲ್ಲಿ ಜ್ಞಾನ ಯೋಗಾಶ್ರಮವನ್ನು ಕಟ್ಟಿ, ಆ ಊರನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ವಚನಕಾರ ಅಲ್ಲಮಪ್ರಭುವನ್ನು ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡಿದ್ದರು. ಅಲ್ಲದೆ, ತಮ್ಮ ಅಂತಿಮ ಇಚ್ಛಾಪತ್ರದಲ್ಲೂ ಆತನ ವಚನವನ್ನೇ ಬರೆದಿದ್ದರು. ಅಂಥ ಜ್ಞಾನಿಗಳು ಅವನ ಬಗ್ಗೆ ಬರೆದಿರುವ ಕೃತಿಯು ಈಗ ಇಂಗ್ಲೀಷಿಗೆ ಭಾಷಾಂತರವಾಗಿರುವುದು ಕನ್ನಡ ಸಂಸ್ಕೃತಿಯ ವಿಸ್ತರಣೆಯ ಭಾಗವಾಗಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮೈಸೂರಿನ ಜೆಎಸ್ಸೆಸ್ ಮಹಾವಿದ್ಯಾಪೀಠವು ಇಲ್ಲಿನ ಶಿವರಾತ್ರೀಶ್ವರ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲಮನ ವಚನಗಳು ತುಂಬಾ ಸಂಕೀರ್ಣವಾಗಿದ್ದು, ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟದ ಸಂಗತಿಯಾಗಿದೆ. ಅವನು ಒಂದು ಪದವನ್ನು ಯಾವ ಅರ್ಥದಲ್ಲಿ ಬಳಸಿದ್ದಾನೆ ಎನ್ನುವುದನ್ನು ಅರಿಯಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಇಂತಹ ಕೃತಿಗಳು ಅನುವಾದಕ್ಕೆ ನಿಲುಕುವುದಿಲ್ಲ. ಆದರೂ ಈ ಸವಾಲನ್ನು ಸ್ವೀಕರಿಸಿ, ಇಂಗ್ಲಿಷ್ ಭಾಷಾಂತರವನ್ನು ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಅವರು ಬಣ್ಣಿಸಿದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅಧ್ಯಯನ, ಆಧ್ಯಾತ್ಮಿಕತೆ ಮತ್ತು ವಸ್ತುನಿಷ್ಠ ನಿಲುವುಗಳಿಗೆ ಹೆಸರಾಗಿದ್ದರು. ಅವರು ಜೊತೆಯಲ್ಲೇ ಸುತ್ತಲಿನ ಪರಿಸರವನ್ನು ಕೂಡ ಅಗಾಧವಾಗಿ ಪ್ರೀತಿಸುತ್ತಿದ್ದರು. ಅವರು ಅಲ್ಲಮನ ವಚನಗಳನ್ನು ತುಂಬಾ ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದರು. ಇಂಗ್ಲಿಷ್ ಮೇಲೆ ಅಗಾಧ ಹಿಡಿತ ಹೊಂದಿದ್ದ ಅವರು, ವಚನ ಸಂಸ್ಕೃತಿಯನ್ನು ಹೊಸ ಬಗೆಯ ಅರ್ಥವಿಸ್ತಾರಕ್ಕೆ ಕೊಂಡೊಯ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡದ ಸಹಜತೆಯಲ್ಲಿ ಮೂಡಿಬಂದಿರುವ ವಚನಗಳು ಇಂಗ್ಲಿಷಿಗೆ ಅನುವಾದಗೊಳ್ಳುವುದರಿಂದ ಅದು ಜಾಗತಿಕ ಸ್ತರದಲ್ಲಿ ಪರಿಚಯವಾಗುತ್ತದೆ. ಇದರಿಂದ ಕರ್ನಾಟಕಕ್ಕೂ ನೆಲೆ-ಬೆಲೆಗಳು ಪ್ರಾಪ್ತವಾಗುತ್ತವೆ. ಶ್ರೀ ಸಿದ್ಧೇಶ್ವರ ಸ್ವಾಮಿಗಳು ತಮ್ಮ ಸಾವಿರಾರು ಉಪನ್ಯಾಸಗಳ ಮೂಲಕ ಈ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರಿಂದಾಗಿ ವಿಜಯಪುರ ಪುಣ್ಯಭೂಮಿಯಾಗಿದೆ ಎಂದು ಅವರು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮಿಗಳು, ನ್ಯಾ.ಕೃಷ್ಣ ದೀಕ್ಷಿತ್, ವಿದ್ವಾಂಸ ಮಲ್ಲೇಪುರಂ ವೆಂಕಟೇಶ, ಸಿ.ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.


