Homeಕರ್ನಾಟಕಮಕ್ಕಳಿಗೆ ಮೊಬೈಲ್ ನಿಷೇಧ | ಸಮಸ್ಯೆಯ ಮೂಲ ಇರುವುದೇ ಪೋಷಕರಲ್ಲಿ: ಮಧು ಬಂಗಾರಪ್ಪ

ಮಕ್ಕಳಿಗೆ ಮೊಬೈಲ್ ನಿಷೇಧ | ಸಮಸ್ಯೆಯ ಮೂಲ ಇರುವುದೇ ಪೋಷಕರಲ್ಲಿ: ಮಧು ಬಂಗಾರಪ್ಪ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು (Social Media) ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಆಲೋಚಿಸುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳು, ಪೋಷಕರು ಮತ್ತು ತಜ್ಞರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಪೋಷಕರು ಮೊದಲು ಎಚ್ಚೆತ್ತುಕೊಳ್ಳಬೇಕು ಮಕ್ಕಳು ಮೊಬೈಲ್ ಚಟಕ್ಕೆ ಬೀಳುವಲ್ಲಿ ಪೋಷಕರ ಪಾತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, “ಇವತ್ತಿನ ವ್ಯವಸ್ಥೆಯಲ್ಲಿ ಮಗು ಅಳುತ್ತಿದೆ ಅಥವಾ ಸುಮ್ಮನಿರಲಿ ಎಂದು ಪೋಷಕರೇ ತಮ್ಮ ಕೈಯಾರೆ ಮೊಬೈಲ್ ಕೊಡುತ್ತಾರೆ. ಸಮಸ್ಯೆಯ ಮೂಲ ಇರುವುದೇ ಅಲ್ಲಿ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬುದು ಕೇವಲ ನಮ್ಮ ರಾಜ್ಯದ್ದಲ್ಲ, ಇಡೀ ದೇಶದ ಸಮಸ್ಯೆಯಾಗಿದೆ” ಎಂದರು.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಸೂಚನೆಯಂತೆ ‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’ ಎಂಬ ಆಂದೋಲನವನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, “ಮುಖ್ಯಮಂತ್ರಿಗಳು ಈಗಾಗಲೇ ಎರಡು-ಮೂರು ಬಾರಿ ಈ ಬಗ್ಗೆ ಎಚ್ಚರಿಸಿದ್ದಾರೆ. ಇದನ್ನು ಕೇವಲ ತರಗತಿಗಳಿಗೆ ಸೀಮಿತಗೊಳಿಸದೆ, ಒಂದು ಜವಾಬ್ದಾರಿಯುತ ತೀರ್ಮಾನವಾಗಿ ಜಾರಿಗೆ ತರಬೇಕಿದೆ. ಈ ಕುರಿತು ವಿಸ್ತೃತ ಚರ್ಚೆಯ ಅಗತ್ಯವಿದೆ” ಎಂದು ಹೇಳಿದರು.

ಅಭಿಪ್ರಾಯ ಸಂಗ್ರಹದ ನಂತರ ತೀರ್ಮಾನ ಮಕ್ಕಳ ಅಭಿಪ್ರಾಯವನ್ನು ಹೇಗೆ ಪಡೆಯಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ತೀರ್ಮಾನ ತೆಗೆದುಕೊಂಡರು ಅದು ಮಕ್ಕಳ ಹಿತದೃಷ್ಟಿಯಿಂದಲೇ ಇರುತ್ತದೆ. ಕೇವಲ ಮಕ್ಕಳಷ್ಟೇ ಅಲ್ಲ, ಶಿಕ್ಷಕರು ಮತ್ತು ಪೋಷಕರ ಜೊತೆಗೂ ಚರ್ಚೆ ಮಾಡಬೇಕಿದೆ. ಪೋಷಕರು ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ತೋರಬೇಕು. ಸದ್ಯಕ್ಕೆ ಈ ವಿಚಾರ ಚರ್ಚೆಯ ಹಂತದಲ್ಲಿದ್ದು, ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments