ಇ.ಎಸ್.ಡಿ.ಎಂ ವಲಯದ ಬೆಳವಣಿಗೆಗೆ ಪೂರಕವಾಗಿ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ವಿವಿಧ ಸಾಮರ್ಥ್ಯದ ಎಐ ಡಾಟಾ ಸೆಂಟರ್ ವಲಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಸಂಬಂಧ ಸದ್ಯದಲ್ಲೇ ಇಂಧನ ಮತ್ತು ಐಟಿ ಸಚಿವರ ಜತೆ ಸಭೆ ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಭವಿಷ್ಯದ ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಖನಿಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಇ.ಎಸ್.ಡಿ.ಎಂ ಮತ್ತು ಕೋರ್ ಮ್ಯಾನಫ್ಯಾಕ್ಚರಿಂಗ್ ವಿಷನ್ ಗ್ರೂಪುಗಳ ಸಭೆಯಲ್ಲಿ ಅವರು ಮಾತನಾಡಿದರು.
ಮೂರು ರೀತಿಯ ಡಾಟಾ ಸೆಂಟರ್ ಗಳು ಇದ್ದು, 500 ಮೆಗಾವ್ಯಾಟ್ ಮತ್ತು ಅದಕ್ಕಿಂತ ದೊಡ್ಡ ಸಾಮರ್ಥ್ಯದ ಹೈಬರ್ಸ್ಕೇಲರ್ ಡಾಟಾ ಸೆಂಟರ್ ಸ್ಥಾಪಿಸಲು ಪೂರಕವಾದ ವಾತಾವರಣ ನಿರ್ಮಿಸಲಾಗುವುದು. ಹಾಗೆಯೇ ಉದ್ಯಮ ಮಟ್ಟದ ಮಧ್ಯಮ ಸಾಮರ್ಥ ಹಾಗೂ 25ರಿಂದ 200 ಮೆಗಾವ್ಯಾಟ್ ಸಾಮರ್ಥದ ಡಾಟಾ ಸೆಂಟರ್ ಗಳನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮಾಡುವ ಉದ್ದೇಶ ಇದ್ದು ಇದಕ್ಕೆ ಹೂಡಿಕೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.
ಕರಾವಳಿ ಭಾಗವನ್ನು 500 ಮೆಗಾವ್ಯಾಟ್ ಸಾಮರ್ಥ್ಯದ ಎಐ ಡೇಟಾ ಹಬ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶ ಇದೆ. ಜೊತೆಗೆ ಮಂಗಳೂರಿನಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪನೆ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದಕ್ಕೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಇ.ಎಸ್.ಡಿ.ಎಂ ವಲಯಕ್ಕೆ ಸೇರಿದ ಜಾಗತಿಕ ಮಟ್ಟದ ಕಂಪನಿಗಳು ಮುಂಬರುವ ದಿನಗಳಲ್ಲಿ 25 ರಿಂದ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಉತ್ಸುಕವಾಗಿವೆ. ಇದು ಆ ಕಂಪನಿಗಳ ಎರಡನೇ ಹಂತದ ಹೂಡಿಕೆಯಾಗಿದ್ದು, ಕರ್ನಾಟಕವು ಇದರಲ್ಲಿ ಹೆಚ್ಚಿನ ಪಾಲನ್ನು ಸೆಳೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಜತೆಗೆ ಬಿಡಿಭಾಗಗಳ ಜೋಡಣೆ, ಅಗತ್ಯ ಪರೀಕ್ಷಾ ಸೌಕರ್ಯ, ಪ್ಯಾಕೇಜಿಂಗ್ ಮತ್ತು ವಿಶೇಷ ಉಗ್ರಾಣದ ಮೂಲಸೌಕರ್ಯಗಳನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದಿದ್ದಾರೆ.
ಅಮೆರಿಕದ ಅರಿಝೋನಾ ಪ್ರಾಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲೇ ಸಂಪೂರ್ಣ ತರಬೇತಿ ಕೊಡುವ ಪದ್ಧತಿ ಇದೆ. ನಮ್ಮಲ್ಲೂ 3 ಮತ್ತು 4ನೇ ಹಂತದ ನಗರಗಳಲ್ಲಿ ಉನ್ನತ ಮಟ್ಟದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಉದ್ಯಮಿಗಳು ಹೇಳಿದ್ದಾರೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸೆಮಿಕಂಡಕ್ಟರ್ ಉದ್ಯಮ ಕೇಂದ್ರಿತ ನಗರಗಳಲ್ಲಿರುವ ಉತ್ಕೃಷ್ಟ ವಿಶ್ವವಿದ್ಯಾಲಯಗಳು ನಮ್ಮಲ್ಲೂ ಕ್ಯಾಂಪಸ್ ತೆರೆಯಲು ಅನುವು ಮಾಡಿಕೊಡುವ ಚಿಂತನೆ ಸಾಗಿದೆ ಎಂದು ಪಾಟೀಲ ನುಡಿದಿದ್ದಾರೆ.
ಅಮೆರಿಕದಲ್ಲಿ ಡೇಟಾ ಕೇಂದ್ರಗಳು ಮತ್ತು ನಿರ್ದಿಷ್ಟ ವಿಶ್ವವಿದ್ಯಾಲಯಗಳು ಹೇಗೆ ಕೆಲಸ ಮಾಡುತ್ತಿವೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಜೊತೆಗೆ ಮಲೇಷಿಯಾದಲ್ಲಿ ಕಳೆದ ಐದು ವರ್ಷಗಳಲ್ಲಿ 50ರಿಂದ 200 ಮೆಗಾವ್ಯಾಟ್ ಡೇಟಾ ಕೇಂದ್ರಗಳ ಕ್ಲಸ್ಟರ್ ಸ್ಥಾಪಿಸಲಾಗಿದೆ. ಈ ಎರಡೂ ದೇಶಗಳಿಗೆ ರಾಜ್ಯದ ಉನ್ನತ ಮಟ್ಟದ ನಿಯೋಗವನ್ನು ಕಳಿಸುವ ವಿಚಾರ ಚರ್ಚೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೋರ್ ಮ್ಯಾನಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕಬ್ಬಿಣದ ಅದಿರಿನ ಲಭ್ಯತೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ರಾಜ್ಯದಲ್ಲಿ ಇದರ ಬಳಕೆಗೆ ಮಿತಿ ಇದ್ದು, ಇದರ ಪರಾಮರ್ಶೆ ಅಗತ್ಯವಿದೆ. ಏಕೆಂದರೆ, ಅದಿರಿನ ಬೇಡಿಕೆಗೂ ಅದರ ಪೂರೈಕೆಗೂ ಅಗಾಧ ವ್ಯತ್ಯಾಸವಿದೆ. ಇದಕ್ಕೆ ಸೂಕ್ತ ನೀತಿ ಅಗತ್ಯವಿದ್ದು, ಸರಕಾರ ಇದನ್ನು ಸಕಾರಾತ್ಮಕವಾಗಿ ಪರಿಶೀಲಿಸಲಿದೆ ಎಂದು ಎಂ ಬಿ ಪಾಟೀಲ ಭರವಸೆ ನೀಡಿದ್ದಾರೆ.
ಈ ವಲಯವು ನೆಟ್-ಝೀರೋ ಗುರಿಯನ್ನು ತಲುಪಬೇಕಾಗಿದೆ. ಇದು ಸಾಧ್ಯವಾಗಬೇಕೆಂದರೆ ನೈಸರ್ಗಿಕ ಅನಿಲ ಮತ್ತು ಮರುಬಳಕೆ ಇಂಧನ ಯಥೇಚ್ಛವಾಗಿ ಸಿಗಬೇಕು. ಮೆದು ಕಬ್ಬಿಣ ಉತ್ಪಾದನಾ ಸ್ಥಾವರಗಳು ಪರಿಸರ ಮಾಲಿನ್ಯ ನಿಯಂತ್ರಣವನ್ನು ಸಾಧಿಸುವಂತಹ ತಂತ್ರಜ್ಞಾನಗಳ ಮೇಲೆ ಹೆಚ್ಚು ಹಣ ವಿನಿಯೋಗಿಸಬೇಕಾಗಿದೆ ಎಂದು ಅವರು ನುಡಿದಿದ್ದಾರೆ.
ಇದೇ ರೀತಿಯಲ್ಲಿ ಆಟೋಮೋಟೀವ್ ಕೈಗಾರಿಕೆಗಳು ತಮಗೆ ಬೇಕಾದ ವಿಶೇಷ ದರ್ಜೆಯ ಉಕ್ಕನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಉಕ್ಕನ್ನು ಭಾರತದಲ್ಲೇ ಉತ್ಪಾದಿಸಲು ಬೆಂಬಲದ ಅಗತ್ಯವಿದೆ ಎನ್ನುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಇದನ್ನು ಸದ್ಯದಲ್ಲೇ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಇನ್ಫೈನಾನ್ ವ್ಯವಸ್ಥಾಪಕ ನಿರ್ದೇಶಕ ವಿನಯ ಶೆಣೈ, ಹಿಟಾಚಿ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ನುಗುರಿ, ಟಾಟಾ ಸೆಮಿಕಂಡಕ್ಟರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಚರಣ್ ಗುರುಮೂರ್ತಿ, ಕೈಗಾರಿಕಾ ಪರಿಣತ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕೋರ್ ಮ್ಯಾನಫ್ಯಾಕ್ಚರಿಂಗ್ ವಿಷನ್ ಗ್ರೂಪ್ ಸಭೆಯಲ್ಲಿ ಜಿಂದಾಲ್ ಸ್ಟೀಲ್ ಸಿಇಒ ಜಯಂತ್ ಆಚಾರ್ಯ, ಗುಲ್ಬರ್ಗ ಸಿಮೆಂಟ್ ನ ಸಿಎಫ್ಓ ಅನಿಲ ಶರ್ಮ, ಬಲ್ದೋಟ ಸ್ಟೀಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಲ್ದೋಟ, ಮುಕುಂದ್ ಸುಮಿ ಮತ್ತು ಕೊಪ್ಪಳದ ಕಲ್ಯಾಣಿ ಸ್ಟೀಲ್ಸ್ ಕಂಪನಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಜ್ಯೋತ್ಸ್ನಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಕೂಡ ಸಭೆಗಳಲ್ಲಿ ಇದ್ದರು.


