ಮುಂದಿನ ಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಗುರುವಾರ ಅವರು ಮಾತನಾಡಿದರು.
“ಇಂದು ಬಿಡಿಎ ಅಧಿಕಾರಿಗಳ ಜತೆ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಉತ್ತರ ಹಾಗೂ ದಕ್ಷಿಣ) ಬಗ್ಗೆ ಪರಿಶೀಲನೆ ಸಭೆ ನಡೆಸಿದೆ. ಇಂದು ಭೂಮಿ ಮಾಲೀಕರಿಗೆ ಪರಿಹಾರದ ಚೆಕ್, ಪ್ರಮಾಣ ಪತ್ರ, ಟಿಡಿಆರ್ ನೀಡಿದ್ದೇನೆ. ಕೆಲವರು 35% ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ಪಡೆದರೆ, ಮತ್ತೆ ಕೆಲವರು ಟಿಡಿಆರ್, ಚೆಕ್ ಮೂಲಕ ಹಣ ಪಡೆದಿದ್ದಾರೆ. ಕಂದಾಯ ಭೂಮಿ ಇದ್ದ ಕಡೆ ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಹಣ ನೀಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಪಟ್ಟು ನೀಡಿದ್ದೇವೆ. 650ಕ್ಕೂ ಹೆಚ್ಚು ಜನ ಒಮ್ಮತದಿಂದ ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುತ್ತಿದ್ದಾರೆ, ಇದರಲ್ಲಿ 400 ಜನರಿಗೆ ವಿತರಣೆ ಮಾಡಿದ್ದೇವೆ” ಎಂದು ತಿಳಿಸಿದರು.
“ಕೆಲವರಿಗೆ ಟಿಡಿಆರ್ ವಿಚಾರದಲ್ಲಿ ಗೊಂದಲ ಇತ್ತು. ಬಿಡಿಎ ವ್ಯಾಪ್ತಿಯಲ್ಲಿ ಇರುವ ಜಾಗದಲ್ಲಿ ಬಿಡಿಎ ಟಿಡಿಆರ್ ವಿತರಣೆ ಮಾಡಿದರೆ, ಜಿಬಿಎ ವ್ಯಾಪ್ತಿಯಲ್ಲಿ ಬರುವ ಜಾಗಕ್ಕೆ ಜಿಬಿಎ ಟಿಡಿಆರ್ ವಿತರಣೆ ಮಾಡಲಿದೆ. ಹತ್ತು ದಿನದಲ್ಲಿ ಈ ಟಿಡಿಆರ್ ಅನ್ನು ನೀಡಬೇಕು ಎಂದು ನಿರ್ದೇಶನ ನೀಡಿದ್ದೇನೆ. ಅವರೇ ಮಾರುಕಟ್ಟೆ ಮೌಲ್ಯದಲ್ಲಿ ಎರಡುಪಟ್ಟು ನೀಡಲಾಗುವುದು” ಎಂದರು
2 ದಿನಗಳಲ್ಲಿ ಇ ಖಾತಾ ಅರ್ಜಿ ವಿಲೇವಾರಿಗೆ ಸೂಚನೆ
“ಇ ಖಾತೆ ವಿಚಾರದಲ್ಲಿ ತೊಂದರೆ ಎದುರಾಗುತ್ತಿದೆ ಎಂಬ ಮನವಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಇ ಖಾತಾ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಯಾರೇ ಅರ್ಜಿ ಹಾಕಿದರೂ 2 ದಿನಗಳಲ್ಲಿ ತೀರ್ಮಾನ ಮಾಡಬೇಕು. ಏನಾದರೂ ಸಮಸ್ಯೆ ಇದ್ದರೆ ನೂರು ಜನರ ಪರಿಶೀಲನಾ ತಂಡವನ್ನು ರಚಿಸಲಾಗಿದ್ದು, ಅವರು ಪರಿಶೀಲನೆ ಮಾಡಲಿದ್ದಾರೆ. 24 ಗಂಟೆ ಒಳಗೆ 60% ಇ ಖಾತಾ ವಿತರಣೆ ಮಾಡುವ ವ್ಯವಸ್ಥೆ ನಡೆಯುತ್ತಿದೆ. 9.34 ಲಕ್ಷ ಅರ್ಜಿಗಳ ಪೈಕಿ 9.31 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ತಿಳಿಸಿದರು.
ಪಾಸ್ ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲಿ 10 ನಾಗರಿಕಸ್ನೇಹಿ ಕೇಂದ್ರ ಸ್ಥಾಪನೆ
“ಬಿ ಖಾತಾಯಿಂದ ಎ ಖಾತಾ ಪರಿವರ್ತನೆ ವಿಚಾರದಲ್ಲಿ 7 ಸಾವಿರ ಜನ ಅರ್ಜಿ ನೀಡಿದ್ದು, ಅವರು ನಕ್ಷೆ ನೀಡಬೇಕಿತ್ತು. ಈಗ ನಮ್ಮ ಅಧಿಕಾರಿಗಳೇ ಸ್ಥಳಕ್ಕೆ ಹೋಗಿ ನಕ್ಷೆ ರೂಪಿಸುವ ಕೆಲಸ ಮಾಡಬೇಕ ಎಂದು ಸೂಚಿಸಿದ್ದೇನೆ. ಜಿಬಿಎ ಹಾಗೂ ಪಾಲಿಕೆಗಳು 15 ದಿನಗಳಲ್ಲಿ ಬಿ ಖಾತಾಯಿಂದ ಎ ಖಾತಾ ಅನುಮೋದನೆ ಮಾಡಬೇಕು ಎಂದು ಸೂಚಿಸಲಾಗಿದೆ” ಎಂದು ತಿಳಿಸಿದರು.
“300 ಅರ್ಜಿಗಳನ್ನು ನಕ್ಷೆ ಹೊರತಾಗಿಯೂ ಅನುಮೋದನೆ ಮಾಡಲಾಗಿದೆ. ನಕ್ಷೆ ಒದಗಿಸಲು ಆಗದವರಿಗೆ 15 ದಿನಗಳಲ್ಲಿ ಆನ್ಲೈನ್ ಮೂಲಕ ಶುಲ್ಕ ಕಟ್ಟಿಸಿಕೊಂಡು ಖಾತಾ ಬದಲಾವಣೆ ಮಾಡಲು ನಿರ್ಧರಿಸಿದ್ದೇವೆ. ಖಾತಾ ಬದಲಾವಣೆಗೆ 1.20 ಲಕ್ಷ ಅರ್ಜಿಗಳು ಬಂದಿದ್ದು, 86% ವಿಲೇವಾರಿ ಮಾಡಲಾಗಿದ್ದು, 18 ಸಾವಿರ ಅರ್ಜಿಗಳು ಬಾಕಿ ಇವೆ. ಮುಂದಿನ ಮೂರು ವಾರದಲ್ಲಿ ಈ ಅರ್ಜಿಗಳ ವಿಲೇವಾರಿ ಆಗಲಿದೆ. 1.02 ಲಕ್ಷ ಅರ್ಜಿ ಪೈಕಿ 56 ಸಾವಿರ ಅರ್ಜಿಗಳು ಅನುಮೋದನೆ ಪಡೆದಿದ್ದು, 46 ಸಾವಿರ ಅರ್ಜಿಗಳು ವಜಾಗೊಂಡಿವೆ. ವಜಾಗೊಂಡ ಅರ್ಜಿಗಳನ್ನು ಮತ್ತೆ ಪರಿಶೀಲಿಸಿ ವಜಾಗೊಳ್ಳಲು ಕಾರಣ ಪತ್ತೆ ಮಾಡಲಾಗುವುದು” ಎಂದು ವಿವರಿಸಿದರು.
“ಪಾಸ್ ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲಿ ಖಾತಾ ವಿಚಾರದಲ್ಲಿ ನಾಗರೀಕ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ. ಒಂದು ವಲಯಕ್ಕೆ ಒಂದು ಕೇಂದ್ರದಂತೆ ಜಿಬಿಎ ಈ ಕೇಂದ್ರ ಆರಂಭಿಸಲಿದೆ. ನಾಗರೀಕ ಸ್ನೇಹಿಯಾಗಿ ಒಂದೇ ಕಡೆ ಎಲ್ಲಾ ಸೇವೆ ಒದಗಿಸಲು ವಿಶ್ವದರ್ಜೆ ಕೇಂದ್ರ ಸ್ಥಾಪಿಸಲಾಗುವುದು. 31.03.2026ಕ್ಕೆ ಚಾಲನೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
“ಪರಿವರ್ತನೆಯಾದ ನಿವೇಶನ ಮಾರಾಟವಾಗುತ್ತಿಲ್ಲ ಎಂಬ ವಿಚಾರ ಚರ್ಚೆ ಮಾಡಲಾಗಿದೆ. ಕಾನೂನು ಪ್ರಕಾರ ಬಡಾವಣೆ ನಿರ್ಮಿಸಬೇಕಿದ್ದು, ಆರ್ ಟಿಸಿ ಆಧಾರದ ಮೇಲೆ ಖಾತಾ ಪರಿವರ್ತನೆ ಮಾಡಬಹುದು ಎಂದು ಸೂಚಿಸಿದ್ದೇನೆ” ಎಂದರು.
*ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಡೆನ್ಮಾರ್ಕ್, ದಕ್ಷಿಣ ಆಫ್ರಿಕಾ ಉತ್ಸುಕ*
“ಡೆನ್ಮಾರ್ಕ್ ಉಪ ಮುಖ್ಯಸ್ಥರಾದ ಮಾಟೀನ್ ಪೀಟರ್ಸನ್ ಹಾಗೂ ದಕ್ಷಿಣ ಆಫ್ರಿಕಾ ಹೈ ಕಮಿಷನರ್ ಅವರು ಇಂದು ನನ್ನನ್ನು ಭೇಟಿ ಮಾಡಿದರು. ಈ ಇಬ್ಬರು ನಮ್ಮ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಉದ್ಯಮಗಳ ಆರಂಭಕ್ಕೆ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ, ತಂತ್ರಜ್ಞಾನ, ಆವಿಷ್ಕಾರ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜೊತೆ ಉತ್ತಮ ಬಾಂಧವ್ಯ ಬೆಳೆಸಲು ಇಂದು ಭೇಟಿ ಮಾಡಿದ್ದಾರೆ. ನಮ್ಮ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ. ಡೆನ್ಮಾರ್ಕ್ ನವರು ದೆಹಲಿ ಬಿಟ್ಟರೆ ಈ ದೇಶದಲ್ಲಿ ಕಚೇರಿ ಹೊಂದಿರುವುದು ಬೆಂಗಳೂರಿನಲ್ಲಿ ಮಾತ್ರ” ಎಂದು ತಿಳಿಸಿದರು.
ಯಾವ ಪರಿಹಾರಕ್ಕೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಕೇಳಿದಾಗ, “ವಾಣಿಜ್ಯ ನಿವೇಶನ ಹಾಗೂ ಪರಿಹಾರ ಹಣಕ್ಕೆ ಜನ ಮುಂದಾಗಿದ್ದಾರೆ. ” ಎಂದು ತಿಳಿಸಿದರು.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಬಜೆಟ್ ನಲ್ಲಿ ಅನುದಾನ ನೀಡಲಾಗುವುದೇ ಎಂದು ಕೇಳಿದಾಗ, “ಅದರ ಅವಶ್ಯಕತೆ ಇಲ್ಲ. ಈಗಾಗಲೇ ಹುಡ್ಕೋ ಮೂಲಕ 26 ಸಾವಿರ ಕೋಟಿ ಸಾಲ ಪಡೆದಿದ್ದೇವೆ. ಇಂದಿನ ಸಭೆಯಲ್ಲಿ ಪರಿಶೀಲನೆ ಮಾಡಿದ ಬಳಿಕ ಇದರಲ್ಲಿ ಹಣ ಉಳಿಯುವ ಸಾಧ್ಯತೆ ಇದೆ” ಎಂದು ತಿಳಿಸಿದರು.
ಟನಲ್ ರಸ್ತೆ ಹಾಗೂ ಬೆಂಗಳೂರಿಗೆ ಕೇಂದ್ರ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡಿಲ್ಲ ಎಂದು ಕೇಳಿದಾಗ, “ಕೇಂದ್ರ ಬಜೆಟ್ ನಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ, ಸಹಾಯ ಮಾಡಿಲ್ಲ. ಟನಲ್ ರಸ್ತೆ ವಿಚಾರದಲ್ಲಿ ಬಿಲ್ಡ್ ಆಪರೇಟ್ ಮಾದರಿ ಇದ್ದು, ಸರ್ಕಾರ ಕೇವಲ 40% ಮಾತ್ರ ನೀಡಲಿದೆ. ನಾವು ಬೇರೆ ರಾಜ್ಯಗಳ ಯೋಜನೆ ನೋಡಿದ್ದೇವೆ. ಇಲ್ಲಿ ಯೋಜನೆ ಮಾಡುವವರೇ ರಿಸ್ಕ್ ತೆಗೆದುಕೊಳ್ಳಬೇಕು” ಎಂದರು.
ಮೆಟ್ರೋ ದರ ಏರಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ
ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ, “ನನ್ನ ಬಳಿಗೆ ಇನ್ನು ಯಾವುದೇ ಫೈಲ್ ಬಂದಿಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿ, ಬಿಎಂಆರ್ ಸಿಎಲ್ ಮುಖ್ಯಸ್ಥರ ಎಂದು ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದು, ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾನು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ” ಎಂದರು.
ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ತಮ್ಮದೇ ಕೇಂದ್ರ ಸಚಿವರಿಗೆ ಈ ವಿಚಾರ ಹೇಳಬೇಕು. ಅವರು ಹೇಳಲು ಸಾಧ್ಯವೇ?” ಎಂದರು.
ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರ ಮಾಡುವುದೋ, ಕೇಂದ್ರ ಸರ್ಕಾರ ಮಾಡುವುದೋ ಎಂದು ಸ್ಪಷ್ಟತೆ ಸಿಕ್ಕಿಲ್ಲ ಎಂದು ಕೇಳಿದಾಗ, “ಈ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಸಮಿತಿ ಸದಸ್ಯರನ್ನು ಬದಲಿಸಿ ದರ ನಿಯಂತ್ರಣ ಮಾಡಬಹುದು ಎಂಬ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೇಗೆ ಬದಲಾವಣೆ ಮಾಡಲು ಸಾಧ್ಯ. ಅವರು ಕರ್ನಾಟಕದವರನ್ನೇ ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮತಿ ಕೊಡಿಸಲಿ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ನೀಡುವುದು ಕೇವಲ 12-13% ಮಾತ್ರ. ಕೇಂದ್ರದವರು ಅಧ್ಯಕ್ಷರಾಗಿರುತ್ತಾರೆ ಎಂದು ಈ ಹಿಂದೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅವರು ನಮಗೆ ಅನುಮತಿ ಕೊಡಿಸಲಿ” ಎಂದರು.
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲವೆ ಎಂದು ಕೇಳಿದಾಗ, “ಈ ವಿಚಾರ ನಮಗೆ ಸಂಬಂಧವಿಲ್ಲ. ಈ ಬಗ್ಗೆ ಅವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹೀಗಾಗಿ ನಾನು ಸಚಿವ ಸಂಪುಟದಲ್ಲಿ ಹಾಗೂ ಸಿಎಂ ಜೊತೆ ಈ ಬಗ್ಗೆ ಚರ್ಚೆ ಕೂಡ ಮಾಡಲು ಆಗಿಲ್ಲ” ಎಂದರು.
ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋ ದರ ದುಬಾರಿ ಆಗಿಲ್ಲವೇ ಎಂದು ಕೇಳಿದಾಗ, “ನಾನು ಬೇರೆ ನಗರಗಳ ದರದ ಜೊತೆ ಹೋಲಿಕೆ ಮಾಡಿ ನೋಡುತ್ತೇನೆ” ಎಂದು ತಿಳಿಸಿದರು.
ನೀರಿನ ದರ ಏರಿಕೆ ಪ್ರಸ್ತಾಪ ಇದೆಯೇ ಎಂದು ಕೇಳಿದಾಗ, “ಸಧ್ಯಕ್ಕೆ ಆ ವಿಚಾರ ಚರ್ಚೆ ಇಲ್ಲ” ಎಂದು ತಿಳಿಸಿದರು.
ಜಿಬಿಎ ಚುನಾವಣೆ ವಾರ್ಡ್ ಮೀಸಲಾತಿ ಬಗ್ಗೆ ಕೇಳಿದಾಗ, “ಈ ಪ್ರಕ್ರಿಯೆಯನ್ನು ಅದಕ್ಕೆ ಆದ ಸಮಿತಿ ಮಾಡಲಿದೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದರು.
ಹೈಕಮಾಂಡ್ ನಾಯಕರು ಆದಷ್ಟು ಬೇಗ ಅಧಿಕಾರ ಹಂಚಿಕೆ ಇತ್ಯರ್ಥ ಮಾಡಬೇಕು ಎಂಬ ಶಾಸಕರು ಹಾಗೂ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಂದು ರಾಜಕೀಯ ಚರ್ಚೆ ಮಾಡುವುದು ಬೇಡ” ಎಂದರು.
ಕೆಲವು ಶಾಸಕರನ್ನು ವಿದೇಶಕ್ಕೆ, ಗೋವಾಕ್ಕೆ ಕಳುಹಿಸಲಾಗುತ್ತಿದೆಯೇ ಎಂದು ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ಈ ವಿಚಾರದಲ್ಲಿ ಭಾಗಿಯಾಗಿಲ್ಲ. ನನ್ನ ಬಳಿ ಯಾರೂ ಈ ವಿಚಾರ ಚರ್ಚೆ ಮಾಡಿಲ್ಲ” ಎಂದರು.
ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, “ನಾಳೆ ಮಂಗಳೂರಿಗೆ ಹೋಗುತ್ತಿದ್ದೇನೆ, ನಾಡಿದ್ದು ರಾಯಚೂರು, ನಂತರ ಗದಗಕ್ಕೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗುವಾಗ ನಮ್ಮ ಕಾರ್ಯದರ್ಶಿಗಳು ಪ್ರವಾಸ ಪಟ್ಟಿ ಬಿಡುಗಡೆ ಮಾಡುತ್ತಾರೆ” ಎಂದರು.
ಸೂಕ್ತ ಸಮಯದಲ್ಲಿ ಕರೆಸಿ ಮಾತನಾಡಲಾಗುವುದು ಎಂಬ ಹೈಕಮಾಂಡ್ ನಾಯಕರು ಹೇಳಿದ್ದರು, ನೀವು ದೆಹಲಿ ಹೋಗುವ ನಿರೀಕ್ಷೆ ಇದೆಯೇ ಎಂದು ಕೇಳಿದಾಗ, “ನಾನು ದೆಹಲಿಗೆ ಹೋದರೆ, ನಿಮಗೆ ತಿಳಿಸಿಯೇ ಹೋಗುತ್ತೇನೆ” ಎಂದು ತಿಳಿಸಿದರು.


