ದೇಶಾದ್ಯಂತ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ ಜಾಲಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಸೇರಿದ 177.3 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಶಾಸಕ ಕೆ.ಸಿ. ವೀರೇಂದ್ರ ಹಾಗೂ ಅವರ ಸಹಚರರ ವಿರುದ್ಧದ ತನಿಖೆಯಲ್ಲಿ ಈವರೆಗೂ ಇಡಿ ಅಧಿಕಾರಿಗಳು, ಸುಮಾರು 320 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಕೃಷಿ ಭೂಮಿ ಮತ್ತು ವಸತಿ ನಿವೇಶನದಂತಹ ಸ್ಥಿರಾಸ್ತಿ ಹಾಗೂ ಚರಾಸ್ತಿಗಳುಸ ಏರಿವೆ. ವೀರೇಂದ್ರ ಪೊಒ ಒಡೆತನದ King567 ನಂತಹ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಯುತ್ತಿತ್ತು. ಈ ಅಕ್ರಮ ಚಟುವಟಿಕೆಗಳ ಮೂಲಕ ವೀರೇಂದ್ರ ಅವರು 2,300 ಕೋಟಿಗಿಂತ ಹೆಚ್ಚಿನ ಆದಾಯ ಗಳಿಸಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿತ್ತು.
ವಂಚನೆ ಮತ್ತು ಸುಲಿಗೆ ಆರೋಪದ ಮೇಲೆ ಕೆ.ಸಿ. ವೀರೇಂದ್ರ ವಿರುದ್ಧ ಹಲವಾರು ರಾಜ್ಯಗಳಲ್ಲಿ ಎಫ್ಐಆರ್‌ಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯವು ತನಿಖೆ ತೀವ್ರಗೊಳಿಸಿದೆ. ಕೆ.ಸಿ. ವೀರೇಂದ್ರ ಅವರನ್ನು 2025 ಆಗಸ್ಟ್ ತಿಂಗಳಲ್ಲಿ ಸಿಕ್ಕಿಂನಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ವಿಂಜೋದಂತಹ ಇತರ ಗೇಮಿಂಗ್ ಪ್ಲಾಟ್‌ಫಾರಂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ವಿಂಜೋ ಗೇಮಿಂಗ್ ವೇದಿಕೆಯ ಸಂಸ್ಥಾಪಕರನ್ನು ಬಂಧಿಸಿತ್ತು. ಅಕ್ರಮವಾಗಿ ಹಣ ಗಳಿಸಲು ಅಲ್ಗಾರಿದಮ್‌ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ 192 ಕೋಟಿ ಮೌಲ್ಯದ ಆಸ್ತಿಗಳ ವಹಿವಾಟು ಸ್ಥಗಿತಗೊಳಿಸಿತ್ತು.


