ಹಿಂದೊಮ್ಮೆ 415 ಸಂಸದರ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಇವತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಿಗೆ ತೃಪ್ತಿ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಂಥ ಹೀನಾಯ ಪರಿಸ್ಥಿತಿ ಬಂದಿದೆ ಎಂದು ಒಂದು ಕ್ಷಣ ಯೋಚಿಸಬೇಕಾಗುತ್ತದೆ. ಹಿಂದೆ ಸೀತೆಯನ್ನು ರಾವಣ ಅಪಹರಿಸಿ ಲಂಕೆಗೆ ತೆಗೆದುಕೊಂಡು ಹೋದನೋ, ಅದೇ ರೀತಿ ಕಾಂಗ್ರೆಸ್ಸಿನವರು ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಂಡಿದೆ. ಈ ನಕಲಿ ಕಾಂಗ್ರೆಸ್ ಪಕ್ಷವು, ಮಹಾತ್ಮ ಗಾಂಧಿಗೂ ಟೋಪಿ ಹಾಕುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಅಷ್ಟೇ ಅಲ್ಲ; ಬಡತನ ನಿರ್ಮೂಲನೆ ಮಾಡುತ್ತೇವೆ; ಗರೀಬಿ ಹಠಾವೋ ಎಂದು ಹೇಳಿ, ಈ ದೇಶದ ಬಡವರಿಗೂ ಮಕ್ಮಲ್ ಟೋಪಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡಿದ ಪರಿಣಾಮವಾಗಿ ಇಂಥ ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ದೇಶ ಮತ್ತು ರಾಜ್ಯದಲ್ಲಿ ಬಂದಿದೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಇಂಥ ಹೀನಾಯ ಪರಿಸ್ಥಿತಿಗೆ ಇವತ್ತು ಯಾಕೆ ಬಂದಿದೆ ಎಂದು ಬೆಳಕು ಚೆಲ್ಲಬೇಕಾಗಿತ್ತು. ಈ ದೇಶದಲ್ಲಿ 1961ರಲ್ಲಿ ಕಾಂಗ್ರೆಸ್ಸಿನ 364 ಸಂಸದರಿದ್ದು, 1984ರಲ್ಲಿ 415 ಸಂಸದರು ಸಂಸತ್ತಿನಲ್ಲಿದ್ದರು ಎಂದು ಗಮನಕ್ಕೆ ತಂದರು.
ನಮ್ಮ ರಾಜ್ಯದಿಂದ ಜಿಎಸ್ಟಿ ತೆರಿಗೆ ಮೂಲಕ ಕೇಂದ್ರಕ್ಕೆ ಎಷ್ಟು ಮೊತ್ತ ಹೋಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ ಎಂದ ಅವರು, ಆಡಳಿತ ಪಕ್ಷದವರ ಮಾತನ್ನು ಕೇಳುತ್ತಿದ್ದರೆ ನಮ್ಮ ರಾಜ್ಯದ ತೆರಿಗೆ ಹಣದಿಂದ ಕೇಂದ್ರ ಸರಕಾರವು ಬಹಳ ಭ್ರಷ್ಟಾಚಾರ ಮಾಡಿದೆ; ಲೂಟಿ ಮಾಡಿದೆ; ಈ ದೇಶದಲ್ಲಿ, ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇದು ಒಂದು ರೀತಿ ಅರ್ಥಹೀನ ಎಂದು ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು
ನಮ್ಮ ರಾಜ್ಯ ಮತ್ತು ಹೊರರಾಜ್ಯಗಳಿಂದ ತೆರಿಗೆ ಮೂಲಕ ಕೇಂದ್ರವು ಜಿಎಸ್ಟಿ ಸಂಗ್ರಹ ಮಾಡುತ್ತಿದೆ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ, ಇಡೀ ದೇಶದಲ್ಲಿ 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣದ ಚರ್ಚೆ ಆಗುತ್ತಿತ್ತು. ಈ ದೇಶದಲ್ಲಿ ಅಭಿವೃದ್ಧಿ ಕುರಿತು ಚರ್ಚೆಯೇ ಆಗುತ್ತಿರಲಿಲ್ಲ. ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು ಎಂದು ಹೇಳಿದರು.
ಮೋದಿಯವರ ಸರಕಾರದ ಭ್ರಷ್ಟಾಚಾರರಹಿತ ಆಡಳಿತ
ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ವಿಶೇಷವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರಕಾರ ಅಧಿಕಾರ ನಡೆಸುವ ನಂತರದಲ್ಲಿ ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿಲ್ಲ. 2014ರಿಂದ 2025ರ ಅವಧಿಯಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ವಿರುದ್ಧ ಯಾವುದೇ ಒಂದು ಭ್ರಷ್ಟಾಚಾರದ ಆರೋಪ ಮಾಡಲು ಕಾಂಗ್ರೆಸ್ಸಿನವರಿಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. ನರೇಂದ್ರ ಮೋದಿಯವರು ಆ ರೀತಿಯ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದನ್ನು ಈ ದೇಶದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು.
ದೇಶದಲ್ಲಿ 2 ಲಕ್ಷ ಸ್ಟಾರ್ಟಪ್ಗಳಿಗೆ ಅವಕಾಶ
ರಕ್ಷಣಾ ಬಜೆಟ್ ಮೊತ್ತ ಹಲವು ಪಟ್ಟು ಹೆಚ್ಚಾಗಿದೆ. ಹೆದ್ದಾರಿಯ ನಿರ್ಮಾಣವೂ ಭರದಿಂದ ಸಾಗಿದೆ ಎಂದು ಗಮನಕ್ಕೆ ತಂದರು. ಉದ್ಯೋಗ ಸೃಷ್ಟಿಗೆ ಪೂರಕವಾಗಿ ಕಾಯ್ದೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು. ಕೇಂದ್ರ ಸರಕಾರದ ನೀತಿಯ ಪರಿಣಾಮವಾಗಿ ಇಡೀ ದೇಶದಲ್ಲಿ 2 ಲಕ್ಷ ಸ್ಟಾರ್ಟಪ್ಗಳಿಗೆ ಅವಕಾಶವಾಗಿದೆ ಎಂದರು. ಯೂನಿಕಾರ್ನ್ಗಳೂ ಆರಂಭವಾಗಿದ್ದು, ಇದರಿಂದ 2024ರವರೆಗೆ 16.6 ಲಕ್ಷ ನೇರ ಉದ್ಯೋಗ ದೇಶದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ಇವತ್ತು ನಕ್ಸಲಿಸಂ ಬಗ್ಗೆ ಚರ್ಚೆ ಆಗುತ್ತಿಲ್ಲ; 2014ರ ಮೊದಲಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ನಕ್ಸಲರು ಅಲ್ಲಿ ದಾಳಿ ಮಾಡಿದರು; ಇಲ್ಲಿ ಪೊಲೀಸರು ನಕ್ಸಲರಿಂದ ಸತ್ತರು; ಇಲ್ಲಿ ಬಡವರ ಪ್ರಾಣಹಾನಿ ಆಗಿದೆ ಎಂದು ಪ್ರಕಟವಾಗಿ ಚರ್ಚೆ ಆಗುತ್ತಿತ್ತು. 2014ರ ಪೂರ್ವದಲ್ಲಿ ಹಲವಾರು ರಾಜ್ಯಗಳಲ್ಲಿ ನಕ್ಸಲರ ಕಾಟ ತೀವ್ರವಾಗಿತ್ತು. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಯವರ ಸರಕಾರದ ನೀತಿಯಿಂದ, ಅಲ್ಲಿ ಹೆಚ್ಚು ಉದ್ಯೋಗಾವಕಾಶ ಸೇರಿ ಮೂಲಭೂತ ಸೌಕರ್ಯಗಳಿಂದ ನಕ್ಸಲರ ಸಮಸ್ಯೆ ಇಲ್ಲವಾಗಿದೆ ಎಂದು ಗಮನ ಸೆಳೆದರು.


