ವಿವಿಧ ನಿಗಮ, ಮಂಡಳಿಗಳಿಗೆ ನೇಮಕಗೊಂಡಿದ್ದ ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
26.01.2024ರ ಅನ್ವಯ ವಿಧಾನಸಭಾ ಸದಸ್ಯರುಗಳಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ 36 ನಿಗಮ, ಮಂಡಳಿಗಳಿಗೆ ನೇಮಿಸಿ ಆದೇಶಿಸಲಾಗಿತ್ತು. ಈಗಾಗಲೇ ಎರಡು ವರ್ಷಗಳ ಅವಧಿ ಮುಗಿದಿದೆ.
ಆ ಮೂಲಕ ನಿಗಮ, ಮಂಡಳಿಗಳ ಕನಸು ಕಂಡಿದ್ದ ಕೈ ನಾಯಕರಿಗೆ ನಿರಾಸೆಯಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 25 ನಿಗಮ, ಮಂಡಳಿಗಳಿಗೆ ನೇಮಕಗೊಂಡಿರುವ ಶಾಸಕರನ್ನು ಮತ್ತೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ 26.01.2026ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದುವರೆಸಲು ಆದೇಶಿಸಲಾಗಿದೆ.
ಎರಡು ವರ್ಷದ ಬಳಿಕ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರು ತಮ್ಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದರು. ಅತ್ತ ತಮಗೂ ನಿಗಮ, ಮಂಡಳಿ ಸ್ಥಾನ ಬೇಕೆಂದು ಪಟ್ಟು ಹಿಡಿದವರಿಗೆ ಇನ್ನುಳಿದ ಅವಧಿಗೆ ಮಾಡೋಣ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭರವಸೆ ನೀಡುತ್ತಿದ್ದರು. ಆದರೆ, ಇದೀಗ ಹಿಂದೆ ನೇಮಕವಾದವರನ್ನೇ ಮುಂದುವರೆಸಿ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.
ಒಂದೆಡೆ ಸಚಿವ ಸಂಪುಟ ಪುನಾರಚನೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಚರ್ಚೆಗಳ ಮಧ್ಯೆ ಈ ಆದೇಶ ಮತ್ತಷ್ಟು ಪ್ರಶ್ನೆಗಳನ್ನು ಮೂಡಿಸಿದೆ. ಒಂದು ವೇಳೆ ಸಂಪುಟ ಪುನಾರಚನೆಯಾದರೆ ನಿಗಮ, ಮಂಡಳಿ ಅಧ್ಯಕ್ಷರಿಗೆ ಸಚಿವ ಸ್ಥಾನ ನೀಡಿ, ಹೊಸ ಮುಖಗಳಿಗೆ ನಿಗಮ, ಮಂಡಳಿ ನೀಡುವ ಸಾಧ್ಯತೆಗಳ ಬಗ್ಗೆಯೂ ವ್ಯಾಖ್ಯಾನಿಸಲಾಗುತ್ತಿದೆ.


