ಪ್ರಸ್ತುತ, ಬದಲಾಗುತ್ತಿರುವ ಗ್ರಾಹಕರ ಜೀವನಶೈಲಿ ಹಾಗೂ ಆಹಾರ ಅಭಿರುಚಿಗಳನ್ನು ಪರಿಗಣಿಸಿ ‘ನಂದಿನಿ’ ಬ್ರ್ಯಾಂಡ್‌ನಲ್ಲಿ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗುತ್ತಿದ್ದು, ಈ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜ.23) ವಿಧಾನಸೌಧದ ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು.
ಕಳೆದ 5 ದಶಕಗಳಿಂದ ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ‘ನಂದಿನಿ’ ಬ್ರ್ಯಾಂಡ್‌ನಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ಸಂಸ್ಥೆಯ 175ಕ್ಕೂ ಹೆಚ್ಚು ಉತ್ಕೃಷ್ಟ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ.
ಇದೀಗ ರಾಜ್ಯದ ಮಾತ್ರವಲ್ಲದೆ ಹೊರರಾಜ್ಯ ಮತ್ತು ಹೊರದೇಶಗಳಲ್ಲಿಯೂ ಸಹ ವಿಶ್ವಾಸ ಗಳಿಸಿರುವ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ನಂದಿನಿ ಇಂದಿನ ಜನರ ಜೀವನಶೈಲಿಗೆ ತಕ್ಕುದಾದ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದೆ. ಜತೆಗೆ ನಕಲಿ ಮತ್ತು ಕಲಬೆರಕೆ ತಡೆಯಲು ಕ್ಯೂಆರ್ ಕೋಡ್ ಭದ್ರತೆಯೂ ಈ ಹೊಸ ಉತ್ಪನ್ನಗಳಲ್ಲಿದೆ. ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ಉತ್ಪನ್ನದ ಅಸಲಿ-ನಕಲಿ ದೃಢೀಕರಣ, ಉತ್ಪಾದನೆ ಮತ್ತು ವಿತರಣಾ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
ಗುಡ್ ಲೈಫ್ ಉಪಬ್ರ್ಯಾಂಡ್‌ನಲ್ಲಿ ಅಧಿಕ ಸುವಾಸನೆಯ ‘ಹೈ ಆರೋಮ ತುಪ್ಪ’, ಪರ್ಲ್ ಪೆಟ್ ಜಾರ್ (Pearl PET Jar) ರೂಪದಲ್ಲಿ ನಂದಿನಿ ಶುದ್ಧ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಹೊಸ ಮಾದರಿಯ ಎನ್-ಪ್ರೋ ಮಿಲ್ಕ್ (ಹಾಲು), ಪ್ರೋಬಯಾಟಿಕ್ ಮೊಸರು, ಪ್ರೊಬಯಾಟಿಕ್ ಮಾವಿನ ಲಸ್ಸಿ, ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ, ನಂದಿನಿ ಡೈರಿ ವೈಟ್ನರ್ ಹಾಲಿನ ಪುಡಿ, ಬಹು ಬೇಡಿಕೆಯುಳ್ಳ ಹತ್ತು ರೂಪಾಯಿಯ ಹಸುವಿನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಿದೆ. ಈ ಉತ್ಪನ್ನಗಳನ್ನು ಸಿಎಂ ಬಿಡುಗಡೆಗೊಳಿಸಿದರು.


