Homeಕರ್ನಾಟಕಇ-ಸ್ವತ್ತು 2.0 ತಂತ್ರಾಂಶದಡಿ 27,138 ಅರ್ಜಿ ಸ್ವೀಕಾರ: ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ

ಇ-ಸ್ವತ್ತು 2.0 ತಂತ್ರಾಂಶದಡಿ 27,138 ಅರ್ಜಿ ಸ್ವೀಕಾರ: ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ

ಇ-ಸ್ವತ್ತು 2.0 ತಂತ್ರಾಂಶದಡಿ ಸಾರ್ವಜನಿಕರಿಂದ ಇದುವರೆಗೆ ಒಟ್ಟು 27,138 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ ಹೊಸ ತಂತ್ರಾಂಶದ ಮೂಲಕ 16,572 ಹಾಗೂ ಹಳೆ ತಂತ್ರಾಂಶದ ಮೂಲಕ 10,566 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸ್ವೀಕೃತಗೊಂಡ ಅರ್ಜಿಗಳಲ್ಲಿ 4,608 ಅರ್ಜಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಲಾಗಿನ್‌ನಲ್ಲಿ, 8,695 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನಲ್ಲಿ, 6,882 ಅರ್ಜಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರ ಲಾಗಿನ್‌ನಲ್ಲಿ ಹಾಗೂ 4,322 ಅರ್ಜಿಗಳು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಲಾಗಿನ್‌ನಲ್ಲಿ ಅನುಮೋದನೆಗಾಗಿ ಬಾಕಿ ಇವೆ. ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳಿಂದ ಅನುಮೋದನೆಯಲ್ಲಿ ವಿಳಂಬವಾಗಿದ್ದು, ತಂತ್ರಾಂಶದಲ್ಲಿನ ತೊಡಕು ನಿವಾರಣೆಗೊಂಡ ಕೂಡಲೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಡ 11,855 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನಲ್ಲಿ ಅಂತಿಮ ಅನುಮೋದನೆಗಾಗಿ ಬಾಕಿ ಉಳಿದಿವೆ, ಈ ರೀತಿ, ವಿವಿಧ ಹಂತಗಳಲ್ಲಿ ಒಟ್ಟು 36,362 ಅರ್ಜಿಗಳು ಅನುಮೋದನೆಗಾಗಿ ಬಾಕಿ ಉಳಿದಿದ್ದು, ಇದುವರೆಗೆ ಇ-ಸ್ವತ್ತು 2.0 ತಂತ್ರಾಂಶದಡಿ ಒಟ್ಟು 6,823 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಖಾತೆಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಮತ್ತು ಹೊಸ ಬಡಾವಣೆಗಳು ಹಾಗೂ ಬಹುಮಹಡಿ (ಅಪಾರ್ಟ್‌ಮೆಂಟ್) ಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮುಂದಿನ ಎರಡು ವಾರಗಳಲ್ಲಿ ಅವಕಾಶ ನೀಡಲಾಗುವುದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳಿಕರಿಸಲು ಕ್ರಮವಹಿಸಲಾಗುತ್ತಿದೆ, ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಸಮಸ್ಯೆ / ಸಂದೇಹಗಳನ್ನು ಬಗೆಹರಿಸಲು ಸರ್ಕಾರ ಬದ್ದವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿರುವ ಸಚಿವರು ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿ (9483476000) ಪ್ರಾರಂಭಿಸಲಾಗಿದ್ದು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಇ-ಸ್ವತ್ತು 2.0 ರಡಿ ಅರ್ಜಿ ಸಲ್ಲಿಸಲು, ಸಂಬಂಧಿತ ದಾಖಲಾತಿ / ಪ್ರಕ್ರಿಯೆಯಲ್ಲಿ / ತಂತ್ರಾಂಶದ ಬಳಕೆಯ ಕುರಿತು ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments