ರಾಜ್ಯ ಸರ್ಕಾರಸಿದ್ದಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳಿವೆ ಎಂಬ ಆಕ್ಷೇಪದ ಮೇಲೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಂದು (ಜ.22) ಆರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ಭಾಷಣ ಓದಲು ನಿರಾಕರಿಸಿದ್ದಾರೆ.
ರಾಜ್ಯಪಾಲರ ನಡೆ ಈಗ ಸರ್ಕಾರ ಮತ್ತು ಲೋಕಭವನದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ರಾಜ್ಯಪಾಲರು ಇಂದು ಬೆಳಿಗ್ಗೆ 11.15ರ ಒಳಗೆ ಕಲಾಪಕ್ಕೆ ಆಗಮಿಸದಿದ್ದರೆ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. “ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಬೇಕು, ಸರ್ಕಾರದ ಸಿದ್ಧಪಡಿಸಿದ ಭಾಷಣ ಓದಬೇಕು” ಎಂಬ ವಿಷಯವನ್ನು ಕೋರ್ಟ್ನಲ್ಲಿ ಪ್ರತಿಪಾದಿಸುವ ಯೋಚನೆಯಲ್ಲಿ ಸರ್ಕಾರವಿದೆ.
ರಾಜ್ಯಪಾಲರು ಭಾರತ ಸರ್ಕಾರದ ಲೋಕಲ್ ಏಜಂಟರಲ್ಲ: ರಾಜಾರಾಂ ತಲ್ಲೂರು
ಇನ್ನು ರಾಜ್ಯಪಾಲರ ನಡೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ರಾಜ್ಯಪಾಲರ ನಡೆಯನ್ನು ಕಟುವಾಗಿ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದನ್ನು ಕಾಣಬಹುದು. ಅವರ ಪೂರ್ಣ ಬರೆಹ ಇಲ್ಲಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಮುಖ್ಯಸ್ಥರಾಗಿರುವ ಮತ್ತು ತನ್ನ ಸೀಲು-ಸಹಿಯಡಿಯಲ್ಲೇ ರಾಜ್ಯದ ಆಡಳಿತಾತ್ಮಕ ನಿರ್ಧಾರಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ, ಅದನ್ನು ಅಧಿಕೃತಗೊಳಿಸುವ ರಾಜ್ಯಪಾಲರು ತಾವೇ “ಹೋಸ್ಟ್” ಆಗಿ ಕರೆದಿರುವ ವಿಧಾನಮಂಡಲ ಅಧಿವೇಶನದ ಆರಂಭದಲ್ಲಿ (ಅದರಲ್ಲೂ ವಿಧಾನಸಭೆಯ ಆರಂಭಿಕ ಅಧಿವೇಶನ ಮತ್ತು ಪ್ರತೀ ವರ್ಷದ ಆರಂಭಿಕ ಅಧಿವೇಶನಗಳು) ಉಭಯ ಸದನಗಳನ್ನು ಉದ್ದೇಶಿಸಿ ತನ್ನ ಸರ್ಕಾರದ ನೀತಿಗಳನ್ನು ಸದನಕ್ಕೆ ವಿವರಿಸುವುದು ಅವರ ಸಾಂವಿಧಾನಿಕ ಜವಾಬ್ದಾರಿ.
ಸಂವಿಧಾನದ 176(1) ವಿಧಿಯನ್ವಯ, ಅದು ರಾಜ್ಯಪಾಲ ಹುದ್ದೆಯಲ್ಲಿರುವವರು ನಿರಾಕರಿಸಲಾಗದ ಜವಾಬ್ದಾರಿ. ಸಂವಿಧಾನ ಸ್ಪಷ್ಟ ಶಬ್ದಗಳಲ್ಲಿ “Governor SHALL address” ಎನ್ನುತ್ತದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದು, ಸಂವಿಧಾನದ ಪಾಲನೆಯ ಪ್ರತಿಜ್ಞೆ ಸ್ವೀಕರಿಸಿರುವ ರಾಜ್ಯಪಾಲರು ಸ್ವತಃ ತನ್ನ ಜವಾಬ್ದಾರಿಯನ್ನು ನಿರಾಕರಿಸುವುದು ಸಂವಿಧಾನಕ್ಕೆ ಅಗೌರವ ತೋರಿಸಿದಂತಾಗಬಹುದು.
ರಾಜ್ಯಪಾಲರಿಗೆ ತಾವು ಓದಬೇಕಾಗಿರುವ ಭಾಷಣದಲ್ಲಿ 11 ಪಾರಾಗ್ರಾಫ್ಗಳಿಗೆ ಆಕ್ಷೇಪ ಇದೆಯಂತೆ. ಅದರಲ್ಲಿ ಒಕ್ಕೂಟ ಸರ್ಕಾರವು MGNREGA ಕಾಯಿದೆ ಬದಲಾಯಿಸಿ VB GRAM G ಕಾಯಿದೆ ತಂದಿರುವುದು ಸೇರಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಅವರ ಈ ಭಾಷಣ, ಅವರ ಸ್ವಂತದ ಭಾಷಣ ಅಲ್ಲ. ಸಾಂವಿಧಾನಿಕವಾಗಿ ಆಯ್ಕೆಯಾದ ಸರ್ಕಾರವೊಂದರ ನಿರ್ಣಯಗಳನ್ನು ಔಪಚಾರಿಕವಾಗಿ ಸದನಕ್ಕೆ ತಿಳಿಸುವ ಪ್ರಕ್ರಿಯೆ. ಇದರಲ್ಲಿ ರಾಜ್ಯಪಾಲರಿಗೆ ವೈಯಕ್ತಿಕವಾದ ಪಾತ್ರ ಏನೂ ಇರುವುದಿಲ್ಲ.
ತಮಿಳುನಾಡಿನಲ್ಲಿ ಮೊನ್ನೆ ಇಂತಹದೇ ಸನ್ನಿವೇಶದಲ್ಲಿ ನಡೆದ ಪ್ರಹಸನದ ಮುಂದುವರಿಕೆಯಾಗಿ ಕರ್ನಾಟಕದಲ್ಲೂ “ಸಾಂವಿಧಾನಿಕ ಬಿಕ್ಕಟ್ಟನ್ನು” ಕೈಯಾರೆ ಸೃಷ್ಟಿಸುವ ಇಂತಹ ತೀರ್ಮಾನಗಳು ದೇಶದ ಸಂವಿಧಾನಕ್ಕೆ ಅಪಾಯಕಾರಿ. ದೇಶದ ಮೇಲೆ ಭಕ್ತಿ, ಸಂವಿಧಾನದ ಮೇಲೆ ಗೌರವ ಇರುವ ಯಾರೂ ಕೂಡ ಇದನ್ನು ಸಮರ್ಥಿಸಬಾರದು. ಇವೆಲ್ಲ ಸಂವಿಧಾನವನ್ನು ತಿರುಚುವ, ಶಿಥಿಲಗೊಳಿಸುವ ಪ್ರಯತ್ನದ ಭಾಗಗಳೇ ಎಂದು ಪರಿಗಣಿತವಾಗಬೇಕು.
ಒಕ್ಕೂಟ ವ್ಯವಸ್ಥೆಯಲ್ಲಿ, ಒಂದು ರಾಜ್ಯ ಸರ್ಕಾರಕ್ಕೆ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳಲ್ಲಿ ರಾಜ್ಯದ ಹಿತ ಕಡೆಗಣನೆ ಆಗಿದೆ ಎಂದು ಅನ್ನಿಸಿದರೆ ಅದನ್ನು ಸಾಂವಿಧಾನಿಕ ಚೌಕಟ್ಟಿನ ಒಳಗೆ ವಿರೋಧಿಸುವ, ವ್ಯವಸ್ಥೆಯ ಮುಖ್ಯಸ್ಥರಾದ ರಾಜ್ಯಪಾಲರ ಬಾಯಿಯಿಂದ ಅದನ್ನು ಹೇಳಿಸುವ ಹಕ್ಕು ಇದೆ. ರಾಜ್ಯಪಾಲರು ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರೇ ಹೊರತು ಭಾರತ ಸರ್ಕಾರದ ಲೋಕಲ್ ಏಜಂಟರಲ್ಲ.


