Homeಕರ್ನಾಟಕಜೋಯಿಡಾ | ರಾಜ್ಯದ ಪ್ರಥಮ ಸಾವಯವ ತಾಲೂಗಾಗಿ ಘೋಷಣೆ, ರೈತರಿಗಾಗಿ 1 ಕೋಟಿ ರೂ. ಅನುದಾನ

ಜೋಯಿಡಾ | ರಾಜ್ಯದ ಪ್ರಥಮ ಸಾವಯವ ತಾಲೂಗಾಗಿ ಘೋಷಣೆ, ರೈತರಿಗಾಗಿ 1 ಕೋಟಿ ರೂ. ಅನುದಾನ

ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೈಜ ಕೃಷಿಗೆ ಒತ್ತು ನೀಡಿ, ಇವರಿಂದ ಬಂದ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಒದಗಿಸಿದಲ್ಲಿ ನೈಜ ಕೃಷಿ ಕಾರ್ಯಕ್ರಮ ಯಶ್ವಸಿಯಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆ ಜಂಟಿಯಾಗಿ “ನೈಸರ್ಗಿಕ ಕೃಷಿ” ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಕೃಷಿ ಇಲಾಖೆಯು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕೆಂದೂ ಘೋಷಿಸಿದೆ. 2025- 2026 ನೇ ಸಾಲಿನ ಆಯವ್ಯಯದಲ್ಲಿ 1 ಕೋಟಿ ಅನುದಾನ ಒದಗಿಸಿ ನೈಜ ಕೃಷಿ ಮಾಡುವ ರೈತರಿಗೆ ರಿಯಾಯಿತಿ ದರದಲ್ಲಿ ಪರಿಕರ ಒದಗಿಸಲಾಗುವುದು ಹಾಗೂ ಕೃಷಿ ಪರಿಕರ ಮಾರಾಟಗಾರರು ರಸಾಯನಿಕ ಪರಿಕರಿಗಳ ಬದಲಾಗಿ ಸಾವಯವ ಪರಿಕರಗಳನ್ನು ಮಾರಾಟ ಮಾಡಿದಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಚಿವರು ಹೇಳಿದರು.

“ರಾಜ್ಯದಲ್ಲಿ ಈಗಾಗಲೇ 990 ಕ್ಲಸ್ಟರ್ ಗಳನ್ನು ಗುರುತಿಸಿ ನೈಜ ಕೃಷಿ ಕಾರ್ಯಕ್ರಮವನ್ನು ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಹಾಗೂ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ನೈಜ ಕೃಷಿ ಪ್ರಾತ್ಯಕ್ಷಿಕೆಯನ್ನು ಕೂಡ ಅನುಷ್ಠಾನ ಮಾಡಲಾಗಿದೆ” ಎಂದರು.

“ಪ್ರಸ್ತುತ ನೈಜ ಕೃಷಿಯನ್ನು ಪ್ರೋತ್ಸಾಹಿಸಲು ಹಾಗೂ ನೈಜ ಕೃಷಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡಲು ಸಾವಯವ ಕ್ಷೇತ್ರಗಳ ಪ್ರಮಾಣಿಕರಣ ಮಾಡುವುದು, ಉತ್ಕೃಷ್ಟ ಬೆಲೆ ನೀಡುವುದು ಹಾಗೂ ಮಾರುಕಟ್ಟೆಯೊಂದಿಗೆ ಜೋಡಿಸುವಲ್ಲಿ ಸೂಕ್ತ ಕ್ರಮ ಕೈಗೊಂಡಲ್ಲಿ ನೈಜ ಕೃಷಿ ಕಾರ್ಯಕ್ರಮವು ಯಶ್ವಸಿಯಾಗಿ, ರೈತರ ಆದಾಯ ಹೆಚ್ಚಿಸುವುದಲ್ಲದೇ ಪರಿಸರ ಸಂರಕ್ಷಣೆ ಸಹ ಆಗುವುದು” ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, “ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರ ಪ್ರಾಬಲ್ಯ ಹೆಚ್ಚಿದೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿಯೂ ಯಶಸ್ಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ, ಮಹಿಳೆಯರು ಈ ರೂಪಾಂತರದ ಕೇಂದ್ರದಲ್ಲಿದ್ದಾರೆ” ಎಂದು ಸಚಿವರು ತಿಳಿಸಿದರು.

“ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ ಮೂಲಕ, ಮಹಿಳಾ ಸ್ವಸಹಾಯ ಗುಂಪುಗಳು ರಾಸಾಯನಿಕ-ಮುಕ್ತ, ಕಡಿಮೆ-ವೆಚ್ಚದ ನೈಸರ್ಗಿಕ ಕೃಷಿಯನ್ನು ಅಭ್ಯಾಸ ಮಾಡುತ್ತಿವೆ, ಕೃಷಿ ಸಖಿಗಳು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿವೆ ಮತ್ತು ಜೈವಿಕ-ಇನ್‌ಪುಟ್ ಉತ್ಪಾದನೆ ಮತ್ತು ಮೌಲ್ಯವರ್ಧನೆಯಲ್ಲಿ ಪ್ರಮುಖ ಉದ್ಯಮಗಳನ್ನು ನಡೆಸುತ್ತಿವೆ. ಇದು ಗಮನಾರ್ಹ ವಿಷಯ” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಸ್ವಾತಿ ಶರ್ಮಾ, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಅಭಿಯಾನದ ನಿರ್ದೇಶಕಿ ಆರ್. ಸ್ನೇಹಲ್ ಮತ್ತು ಹೆಚ್ಚುವರಿ ಅಭಿಯಾನ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments