ಅಬಕಾರಿ ಸಚಿವರನ್ನು ವಜಾ ಮಾಡದೇ ಇಟ್ಟುಕೊಂಡಿದ್ದನ್ನು ನೋಡಿದಾಗ ಮಾನ್ಯ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರೂ ಭ್ರಷ್ಟಾಚಾರ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಅಬಕಾರಿ ಇಲಾಖೆ ಭ್ರಷ್ಟಾಚಾರ ಒಂದು ವರ್ಷದ ಹಿಂದೆಯೇ ಜಗಜ್ಜಾಹೀರಾಗಿತ್ತು. ಆ ಸಂದರ್ಭದಲ್ಲಿ ತೇಪೆ ಹಾಕುವ ಕೆಲಸ ಮಾಡಿದ್ದರು. ಅವತ್ತೇ ಮಂತ್ರಿಯನ್ನು ವಜಾ ಮಾಡಬೇಕಿತ್ತು ಎಂದು ತಿಳಿಸಿದರು.
“ಈ ಸರಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಟೀಕಿಸಿದರು. ಯಾರು ಈ ಸರಕಾರವನ್ನು ಬೆಂಬಲಿಸಿದರೋ ಅವರೇ ಇವತ್ತು ಈ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಮಾತನಾಡುತ್ತಿದ್ದಾರೆ ಎಂದು ನುಡಿದರು. ಅಂಥ ವಾತಾವರಣ ನಿರ್ಮಾಣವಾಗಿದೆ. ಗುತ್ತಿಗೆದಾರರೇ ಶೇ 60 ಕಮಿಷನ್ ಆರೋಪ ಮಾಡಿದ್ದಾರೆ” ಎಂದು ಗಮನ ಸೆಳೆದರು.
“ಸರಕಾರವು ಭ್ರಷ್ಟಾಚಾರದ ಚರಮಸೀಮೆಗೆ ತಲುಪಿದೆ. ಮುಖ್ಯಮಂತ್ರಿಗಳು ಕೂಡ ಇನ್ನೆಷ್ಟು ದಿನ ಇರುತ್ತೀನೋ, ನಾಳೆ ಮತ್ತೆ ಈ ಅವಕಾಶ ಸಿಗಲ್ಲ; ಇದ್ದಾಗ ಎಷ್ಟು ಚೀಲ ತುಂಬಿಸಿಕೊಳ್ಳಲು ಸಾಧ್ಯವೋ ಅಷ್ಟು ಚೀಲ ತುಂಬಿಸಿಕೊಳ್ಳುವ ನೀತಿ ಅಳವಡಿಸಿಕೊಂಡಿದ್ದಾರೆ ಎಂದು ಸಿ.ಟಿ. ರವಿ ಅವರು ಆಕ್ಷೇಪಿಸಿದರು. ಭ್ರಷ್ಟಾಚಾರದ ವಿಷಯದ ಬಗ್ಗೆ ಈ ಸರಕಾರದಲ್ಲಿ ಭ್ರಷ್ಟಾಚಾರಿಗಳಿಗೇ ಪ್ರೋತ್ಸಾಹ ಕೊಡುವ ವ್ಯವಸ್ಥೆ ನಿರ್ಮಾಣವಾಗಿದೆ” ಎಂದು ದೂರಿದರು.
25 ದಿನ ಜಾಸ್ತಿ ಸಿಕ್ಕಿದ್ದರಿಂದ ಯಾರಿಗೆ ಅನ್ಯಾಯ ಆಗಲಿದೆ?
ಪ್ರಶ್ನೆಯೊಂದಕ್ಕೆ ಉತ್ತರಿಸಿ, “ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಇವರು ಹೇಳುವಂತೆ ವಿರೋಧಿಸುವ ಅಂಶಗಳಿಲ್ಲ. ಕಾಂಗ್ರೆಸ್ಸಿನವರು ಬಾಯಿ ಬಡ್ಕೊಳ್ಳುವುದನ್ನು ನೋಡಿದರೆ, ಏನೋ ಇರಬಹುದೇನೋ ಎಂದು ಅಧ್ಯಯನ ಮಾಡಿದ್ದೇನೆ. ಮುಂಚೆ 100 ದಿನ ಇತ್ತು. ಈಗ 125 ದಿನ ಕೊಟ್ಟಿದ್ದಾರೆ. ಯಾರಿಗೆ ಅನ್ಯಾಯ ಆಗಲಿದೆ ಎಂದು ಕೇಳಿದರು. 25 ದಿನ ಜಾಸ್ತಿ ಸಿಕ್ಕಿದ್ದರಿಂದ ಯಾರಿಗೆ ಅನ್ಯಾಯ ಆಗಲಿದೆ” ಎಂದು ಪ್ರಶ್ನಿಸಿದರು.
ರಾಮನ ಬಗ್ಗೆ ಯಾಕೆ ಇವರಿಗೆ ದ್ವೇಷ?
“ಮುಂಚೆ ಆಸ್ತಿ ನಿರ್ಮಾಣಕ್ಕೆ ಒತ್ತು ಕೊಡುತ್ತಿರಲಿಲ್ಲ; ಈಗ ಆಸ್ತಿ ನಿರ್ಮಾಣಕ್ಕೆ ಒತ್ತು ಕೊಡುತ್ತಿದ್ದಾರೆ. ಇದು ಅಪರಾಧವೇ? ಎಂದರು. ಮೊದಲು ಜೀವನೋಪಾಯಕ್ಕಾಗಿ ಕೂಲಿ; ಈಗ ಕೌಶಲ್ಯಾಭಿವೃದ್ಧಿ ಮಾಡಿ ಅವರು ಸ್ವಾವಲಂಬಿ ಆಗಲು ಯೋಜನೆಯಲ್ಲಿ ಅಳವಡಿಸಿದ್ದಾರೆ. ಇದರಿಂದ ಒಳ್ಳೆಯದೇ ಕೆಟ್ಟದ್ದೇ ಎಂದು ಪ್ರಶ್ನೆ ಹಾಕಿದರು. ಅವರು ಹೇಳಲಿ. ಚರ್ಚೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದ ಅವರು, ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿದರು ಎನ್ನುತ್ತಿದ್ದಾರೆ. ಮಹಾತ್ಮ ಗಾಂಧಿಗೇ ಪ್ರೇರಣೆ ಕೊಟ್ಟಿದ್ದು ರಾಮ. ರಾಮನ ಬಗ್ಗೆ ಯಾಕೆ ಇವರಿಗೆ ದ್ವೇಷ ಎಂದು ಕೇಳಿದರು. ಮಹಾತ್ಮ ಗಾಂಧಿ ದಿನಬೆಳಗಾದರೆ ಹೇಳುತ್ತಿದ್ದುದು ರಾಮರಾಜ್ಯದ ಕಲ್ಪನೆಯನ್ನು ಎಂದು ತಿಳಿಸಿದರು. ರಾಮನ ಗುಣಗಾನದ ಬಗ್ಗೆ ಈ ಸರಕಾರಕ್ಕೆ ಇಷ್ಟೊಂದು ಅಸಹಿಷ್ಣುತೆ ಯಾಕೆ” ಎಂದು ಪ್ರಶ್ನಿಸಿದರು.


