ಕೇಂದ್ರ ಸರ್ಕಾರದ ವಿ.ಬಿ ಜಿ- ರಾಮ್- ಜಿ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ದ ರಾಜ್ಯ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಜೊತೆಗೆ ಕಾನೂನು ಹೋರಾಟ ರೂಪಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಯ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಥೂರಾಮನ ಕಾಯ್ದೆ
ಕೇಂದ್ರದ ವಿಬಿ. ಜಿ- ರಾಮ್- ಜಿ ಕಾಯ್ದೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಅದು ನಾಥೂರಾಮ.ನಾಥೂರಾಮ ಎಂದರೆ ಅದು ಆರ್ ಎಸ್ ಎಸ್ ತತ್ವದ ರಾಮ. ಆರ್ ಎಸ್ ಎಸ್ ತತ್ವಗಳು ಹೇಗಿರುತ್ತವೆ ಎಂದು ಗೊತ್ತಿದೆಯಲ್ಲ? ಅವು ಬಡವರ ವಿರುದ್ದವಾಗಿರುತ್ತವೆ. ಧರ್ಮದ ನಶೆಯಲ್ಲಿ ಜನರನ್ನು ತೇಲಾಡಿಸುವುದು ಆಗಿದೆ ಎಂದು ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ ಅವರು ಕಾಯ್ದೆ ವಿರುದ್ದ ನಿರ್ಣಯ ಕೈಗೊಳ್ಳಲಾಗಿದೆ. ಕಾಯ್ದೆ ಬಗ್ಗೆ ವಿವರವಾಗಿ ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಕೂಡಾ ತೀರ್ಮಾನಿಸಲಾಗಿದೆ ಅವರು ಅವರ ವಿಚಾರ ಹೇಳಲಿ. ನಾವು ನಮ್ಮ ವಿಚಾರ ಹೇಳುತ್ತೇವೆ. ಇದರ ಜೊತೆಗೆ ಕಾನೂನು ಹೋರಾಟ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರ ದೊಂದಿಗೆ ಮಹಿಳಾ ಸಂಘಟನೆಗಳು, ಕೂಲಿ ಕಾರ್ಮಿಕರ ಸಂಘಟನೆಗಳು ಕೈಜೋಡಿಸಲು ಮುಂದಾಗಿವೆ. ಮೂರು ಕೃಷಿಕಾಯ್ದೆಗಳು ವಾಪಸ್ ಪಡೆದಂತೆ ಇದು ಕೂಡಾ ವಾಪಸ್ ಆಗಲಿದೆ ಎಂದರು.
ಈ ಹಿಂದಿನ ನರೇಗಾ ಯೋಜನೆಯಲ್ಲಿ ಅವ್ಯವಹಾರ ಆಗಿದ್ದು ಅದಕ್ಕೆ ಹೊಸ ಕಾಯ್ದೆ ಅದನ್ನು ತಡೆಯಲು ಜಾರಿಯಾಗುತ್ತಿದೆ. ಹಾಗಾಗಿ ಕಾಂಗ್ತೆಸ್ ವಿರೋಧಿಸಿತ್ತಿದೆ ಎಂದು ಬಿಜೆಪಿ ಹೇಳಿರುವುದರ ಕುರಿತು ಪ್ರಶ್ನಿಸಿದಾಗ ದಿನಕ್ಕೆ ಸುಮಾರು12 ಕೋಟಿ ಕಾರ್ಮಿಕರು ಕೆಲಸ ಮಾಡುವಂತ ಯೋಜನೆ. ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ನಡೆಯುತ್ತಿತ್ತು. ಅಂತಹ ಬೃಹತ್ ಯೋಜನೆಯಲ್ಲಿ ಎಲ್ಲೋ ಒಂದೆರಡು ಕಡೆ ತಪ್ಪುಗಳಾದಾಗ ಇಡೀ ಯೋಜನೆಯನ್ನೇ ರದ್ದು ಗೊಳಿಸಬೇಕಾ? ನೆಗಡಿ ಬಂದರೆ ಮೂಗನ್ನೇ ಕತ್ತರಿಸಿಕೊಳ್ಳಬೇಕಾ? ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯಲ್ಲಿ ಸುಮಾರು 14,500 ಕೋಟಿ ಅವ್ಯವಹಾರವಾಗಿದೆ ಎಂದು ವರದಿ ಹೇಳುತ್ತಿದೆ. ಹಾಗಾದಾರೆ, ಅದನ್ನು ಯಾಕೆ ರದ್ದು ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಳೆದ 20 ವರ್ಷದಿಂದ ನರೇಗಾ ಕಾಯ್ದೆ ಜಾರಿಗೆ ಬಂದಿದೆ. ಇವರು ಕಳೆದ 11 ವರ್ಷದಿಂದಲೂ ಅಧಿಕಾರದಲ್ಲಿದ್ದರು ಭ್ರಷ್ಟಾಚಾರ ನಡೆದಿದ್ದರೆ ಆಗ ವಿರೋಧಸದೆ ಏನು ಕತ್ತೆ ಕಾಯುತ್ತಿದ್ದರಾ? ಆಗಲಿಂದಲೂ ಇವರಿಗೆ ಪಾಲೂ ಹೋಗಿತ್ತಾ ? ಅಥವಾ ಹೋಗಿರುವ ಪಾಲು ಕಡಿಮೆಯಾಗಿತ್ತಾ ಎಂದು ಪ್ರಶ್ನಿಸಿದರು.
ವರದಿ ನಂತರ ಕ್ರಮ
ಯಾದಗಿರಿಯಲ್ಲಿ ಕ್ರೀಡಾಪಟುವೊಬ್ಬ ಪ್ರತಿಭಟನೆ ಮಾಡಿದ್ದು ನಂತರ ಅವರ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ಮತ್ತು ಸಂಗೀತಗಾರರ ಉಪಕರಣಗಳನ್ನು ಒಡೆದು ಹಾಕಿರುವ ಘಟನೆ ಬಗ್ಗೆ ಕೇಳಿದಾಗ, ಆ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜಕೀಯ ದುರುದ್ದೇಶದಿಂದ ಬಿಲ್ ತಡೆಯುವುದು ಸರಿಯಲ್ಲ
ದ್ಷೇಷ ಭಾಷಣ ವಿರುದ್ಧದ ಬಿಲ್ ರಾಜ್ಯಪಾಲರ ಬಳಿ ಇರುವ ಕುರಿತು ಪ್ರಶ್ನಿಸಿದಾಗ, ಸರ್ಕಾರದ ಕೆಲವೊಂದು ಬಿಲ್ ಗಳು ಪಾಸಾಗಿವೆ ಕೆಲವೊಂದು ಅವರ ಬಳಿ ಇವೆ. ಸರ್ಕಾರಕ್ಕೆ ಸಲಹೆ ಸೂಚನೆ ಇದ್ದರೆ ಕೊಡಲಿ ಆದರೆ ರಾಜಕೀಯ ದುರುದ್ದೇಶದಿಂದಾಗಿ ತಡೆಹಿಡಿಯುವುದು ಸರಿಯಲ್ಲ ಎಂದ ಸಚಿವರು ಹೇಳಿದರು.
ಮೀಸಲಾತಿ ವಿರೋಧಿ
ಬಿಜೆಪಿ ಪಕ್ಷ ಮೊದಲಿನಿಂದಲೂ ವಿರೋಧಿಗಳಾಗಿದ್ದಾರೆ ಎಂದು ದೂರಿದ ಸಚಿವರು ಸುಪ್ರಿಂ ಕೋರ್ಟ್ ಒಳಮೀಸಲಾತಿ ತೀರ್ಮಾನ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಈ ವಿಚಾರದಲ್ಲಿ ಸರ್ಕಾರ ತೀರ್ಮಾನ ಮಾಡಲಿದೆ ಎಂದರು.
ಅಕ್ರಮ ಬಾಂಗ್ಲಾ ವಲಸೆ ತಡೆ ಕೇಂದ್ರದ ಕೆಲಸ
ಅಕ್ರಮ ಬಾಂಗ್ಲಾ ವಲಸೆ ತಡೆಗಟ್ಟಬೇಕಿರುವುದು ಕೇಂದ್ರದ ಜವಾಬ್ದಾರಿ ಎಂದ ಪ್ರಿಯಾಂಕ್ ಖರ್ಗೆ, ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಬಾಂಗ್ಲಾದೇಶದ ಪ್ರಜೆಗಳು ಗಡಿಯಿಂದ ಒಳಗೆ ಬಂದರೆ ಅದನ್ನು ಗೃಹ ಸಚಿವ ಅಮಿತ್ ಶಾ ತಡೆಯಬೇಕು. ಆ ಅಧಿಕಾರ ಅವರ ಕೈಯಲ್ಲಿ ಇದೆ. ಅದನ್ನು ಬಿಟ್ಟು ತಮಿಳುನಾಡು, ಬಿಹಾರ ಚುನಾವಣೆಯ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ನನ್ನ ಪ್ರಕಾರ ಅವರೊಬ್ಬ ಅಸಮರ್ಥ ಗೃಹ ಸಚಿವರು ಎಂದರು.
ಆರ್ ಓ ಪಿಗಳ ನಿರ್ವಹಣೆಗೆ ನೀಲಿ ನಕ್ಷೆ
ಗ್ರಾಮೀಣ ಭಾಗದಲ್ಲಿ ಕುಡಿಯುವ ಶುದ್ಧ ನೀರು ಒದಗಿಸುವ ಆರ್ ಓ ಪಿಗಳ ನಿರ್ವಹಣೆಗೆ ನೀಲಿ ನಕ್ಷೆ ತಯಾರಿಸಲಾಗುತ್ತಿದೆ. ಈ ಹಿಂದೆ ಕಂಪನಿಗಳ ಸಿಎಸ್ ಆರ್ ನಿಧಿಯಿಂದ ಸ್ಥಾಪಿಸಿ ನಿರ್ವಹಣೆಗೆ ಗ್ರಾಪಂ ಗಳಿಗೆ ವಹಿಸಲಾಗುತ್ತಿತ್ತು. ಅದರಿಂದ ಆರ್ ಓಪಿಗಳ ನಿರ್ವಹಣೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ, ಯಾವ ಕಂಪನಿಗಳು ತಯಾರಿಲ್ಲ. ಆದರೂ, ಈ ಬಗ್ಗೆ ಕಾರ್ಯನಿರ್ವಹಣೆ ಕುರಿತು ಹಾಗೂ ನೂತನ ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆ ಹಾಗೂ ಉಳಿಕೆ ಬಗ್ಗೆ ಸಮಗ್ರ ಕಾರ್ಯರೂಪಿಸಿಲು ನೀಲಿನಕ್ಷೆ ತಯಾರಿಸಲಾಗುವುದು ಎಂದರು.
ತನಿಖಾ ವರದಿ ಸಿಎಂ ಬಳಿ
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಹಾಗೂ ಇತ್ತೀಚಿಗೆ ಅನುದಾನ ಬಿಡುಗಡೆಯಾಗಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಂಘಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹಾಗೆ ಸಂಘವನ್ನು ಮುಚ್ಚಿಲ್ಲ. ಯಾಕೆಂದರೆ ಸಂಘದ ವ್ಯವಹಾರಗಳ ಕುರಿತು ಇನ್ನೂ ಆಡಿಟ್ ಬಾಕಿ ಇದೆ ಈಗಿನವರೆಗೆ ಕೈಗೊಂಡ ತನಿಖಾವರದಿ ಸಿಎಂ ಅವರ ಕೈ ಸೇರಿದೆ ಎಂದರು.
ಮೆಗಾಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ
ಮೆಗಾ ಟೆಕ್ಸಟೈಲ್ ಪಾರ್ಕ್ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದ ಸಚಿವರು ನಗರ ಪ್ರದೇಶದ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ ಆಡಿಟ್ ನಡೆಸಲಾಗಿದ್ದು ಸಧ್ಯದಲ್ಲಿ ಆ ವಿಚಾರ ಹಂಚಿಕೊಳ್ಳುವುದಾಗಿ ಅವರು ಹೇಳಿದರು.
ಬದಲಾವಣೆ
ಸಂಕ್ರಾಂತಿ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆಯಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಹೌದು. ಸಾಕಷ್ಟು ಬದಲಾವಣೆ ಯಾಗಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧಪಕ್ಷದ ನಾಯಕರು ಬದಲಾಗಲಿದ್ದಾರೆ ಎಂದು ವ್ಯಂಗ್ಯವಾಡಿದರು.


