Homeಕರ್ನಾಟಕಕೋಗಿಲು ಅತಿಕ್ರಮಣ | ಎರಡೇ ದಿನದಲ್ಲಿ ಪರಿಹಾರ ವ್ಯವಸ್ಥೆಗೆ ಮುಂದಾಗಿರುವುದು "ತುಷ್ಟೀಕರಣದ ಶರವೇಗ": ಜೋಶಿ

ಕೋಗಿಲು ಅತಿಕ್ರಮಣ | ಎರಡೇ ದಿನದಲ್ಲಿ ಪರಿಹಾರ ವ್ಯವಸ್ಥೆಗೆ ಮುಂದಾಗಿರುವುದು “ತುಷ್ಟೀಕರಣದ ಶರವೇಗ”: ಜೋಶಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಕೋಗಿಲು ಅತಿಕ್ರಮಣದಾರರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ವ್ಯವಸ್ಥೆಗೆ ಮುಂದಾಗಿರುವುದು “ತುಷ್ಟೀಕರಣದ ಶರವೇಗ” ವನ್ನು ತೋರ್ಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ರೈತರು, ಬೆಳೆಹಾನಿ ಸಂತ್ರಸ್ತರು ಮತ್ತು ಇತರೆ ನಿರಾಶ್ರಿತರು ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ. ಗೃಹಲಕ್ಷ್ಮಿ ಫಲಾನುಭವಿಗಳೂ ಗ್ಯಾರೆಂಟಿ ನಿಧಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ಕೋಗಿಲು ಅತಿಕ್ರಮಣದಾರರಿಗೆ ಮಾತ್ರ ಕ್ಷಣಾರ್ಧದಲ್ಲಿ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮಿತಿಮೀರಿದ “ಧರ್ಮ ಓಲೈಕೆ” ಆಡಳಿತವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಅತಿಕ್ರಮಣದಾರರಿಗೆ ಮನೆ ಮತ್ತು ಸಬ್ಸಿಡಿ ವಿಪರ್ಯಾಸ

ಈ ಅತಿಕ್ರಮಣದಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸಹ ಘೋಷಿಸಿದ್ದು, ಪ್ರತಿ ಮನೆಗೆ 8 ರಿಂದ 11 ಲಕ್ಷ ರೂ. ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇವಲ ಒಂದು ಧರ್ಮದ ಓಲೈಕೆಯಲ್ಲೇ ಮುಳುಗಿದೆ. ತುಷ್ಟೀಕರಣಕ್ಕಾಗಿ ಶರವೇಗದಲ್ಲಿ ಪರಿಹಾರ ಕ್ರಮ ಕೈಗೊಂಡಿದೆ. ಅಲ್ಲದೇ, ಔಪಚಾರಿಕ ಪರಿಹಾರ ನೀಡಲು ಮುಂದಾಗಿದ್ದು, ಅತಿ ಬೇಸರದ ಸಂಗತಿ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರ, ಪ್ರವಾಹದಂತಹ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಪಡೆಯಲು ರಾಜ್ಯದ ಸಂತ್ರಸ್ತರು ವರ್ಷಗಳಿಂದ ಕಾಯುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಕೋಗಿಲು ಅತಿಕ್ರಮಣದಾರರಿಗೆ ಕೇವಲ ಎರಡೇ ಎರಡು ದಿನಗಳಲ್ಲಿ ಪರಿಹಾರ ಒದಗಿಸಿ ತನ್ನ ಧರ್ಮಾಧಾರಿತ ಆಡಳಿತವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಪಕ್ಕದ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕರೆ ಮಾಡಿ, ತಕ್ಷಣ ಪರಿಹಾರ ಕ್ರಮಕ್ಕೆ ನಿರ್ದೇಶಿಸಿದ್ದು, ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ ವರ್ತಿಸುತ್ತಿದೆ. ತನ್ನ ಆದ್ಯ ಕರ್ತವ್ಯ ಮತ್ತು ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಟೀಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

“ಈ ಸರ್ಕಾರದ ಆಡಳಿತದಲ್ಲಿ ರೈತರು, ನಿಜವಾದ ಸಂತ್ರರು, ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬೇಕಾದ ಪರಿಸ್ಥಿತಿ ಇದೆಯೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ” ಎಂದು ಜೋಶಿ ಚಾಟಿ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments