Homeಕರ್ನಾಟಕಗೃಹ ಇಲಾಖೆ ನಡೆಸಲು ಆಗದಿದ್ದರೆ ಸಚಿವರು ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

ಗೃಹ ಇಲಾಖೆ ನಡೆಸಲು ಆಗದಿದ್ದರೆ ಸಚಿವರು ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

ಕರ್ನಾಟಕದ ಗೃಹ ಇಲಾಖೆಯನ್ನು ನಡೆಸಲು ಆಗದಿದ್ದರೆ ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಪೋಸ್ಟರ್’ ಅನ್ನು ಅವರು ಬಿಡುಗಡೆಗೊಳಿಸಿದರು. ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡು ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಬೇರೆ ಯಾರಿಗಾದರೂ ತಾಕತ್ತಿದ್ದರೆ ಆಡಳಿತ ನಡೆಸಲಿ ಎಂದು ಒತ್ತಾಯಿಸಿದರು.

ಪರಮೇಶ್ವರ್ ಅವರೇ, ಇದು ನಿಮ್ಮ ಅಸಹಾಯಕತೆಯೇ? ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ವಿರುದ್ಧವಾಗಿ ಮಾಡಿದ ಷಡ್ಯಂತ್ರವೇ ಎಂದು ಹೇಳಿ ಎಂದು ಆಗ್ರಹವನ್ನು ಮುಂದಿಟ್ಟರು.
ರಾಜ್ಯದಲ್ಲಿ ಡ್ರಗ್ ಮಾಫಿಯ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಾಫಿಯಕ್ಕೆ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರಕಾರವೇ ಡ್ರಗ್ ಸರಕಾರವಾಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಡ್ರಗ್ ಕಾರ್ಖಾನೆ ತಲೆ ಎತ್ತಿರುವುದು ಹೊರಕ್ಕೆ ಬರುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮೊದಲಿನಿಂದ ತಿಳಿಸಿ, ನಿದರ್ಶನ ನೀಡಿದ್ದೇವೆ. ಅತ್ಯಾಚಾರಗಳು ನಡೆಯುತ್ತಿದ್ದವು. ಎಷ್ಟೋ ಪ್ರಾಣಹಾನಿಗಳಾದವು. ಹತ್ಯೆಗಳೂ ನಡೆದವು. ಆದರೆ, ತಡೆಯಲು ಈ ಸರಕಾರದಿಂದ ಆಗಲಿಲ್ಲ ಎಂದು ಟೀಕಿಸಿದರು.

ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ?

ಸರಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ ಎಂದು ಆರೋಪಿಸಿದರು. ಡ್ರಗ್ ಪೆಡ್ಲರ್‍ಗಳನ್ನು ನಮ್ಮ ಸರಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊಲೀಸರು ದಾಳಿ ಮಾಡಬೇಕಾಯಿತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ರಾಜ್ಯದ ಗೃಹ ಇಲಾಖೆ ಸತ್ತು ಹೋಗಿದೆಯೇ? ಬೇಹುಗಾರಿಕಾ ದಳ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಪೊಲೀಸರು ಇದನ್ನು ಪತ್ತೆ ಹಚ್ಚಿದ ಬಳಿಕ ಇಲ್ಲಿನ ಕಾಂಗ್ರೆಸ್ ಸರಕಾರ ನಾವು ಹಿಡಿದಿದ್ದೇವೆ ಎಂದು ತಿಳಿಸಿ, ಘನ ಕಾರ್ಯ ಮಾಡಿದಂತೆ ವರ್ತಿಸುತ್ತದೆ ಎಂದು ಆರೋಪಿಸಿದರು.

ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರಕಾರದ ಕುಮ್ಮಕ್ಕು

ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರಕಾರದ ಕುಮ್ಮಕ್ಕಿದೆ. ಗಂಧದ ನಾಡು ಗಾಂಜಾ ಬೀಡಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ಪರಿಸ್ಥಿತಿ ಬಂದಿದೆ. ಆ್ಯಂಟಿ ನಕ್ಸಲ್ ದಳದ ಕೆಲಸ ಮುಗಿದುಹೋಗಿದೆ. ಅದನ್ನು ಆ್ಯಂಟಿ ಡ್ರಗ್ಸ್ ದಳವಾಗಿ ಮಾಡಿ ಮಾದಕವಸ್ತು ಜಾಲದ ಸಂಪೂರ್ಣ ಮೂಲೋತ್ಪಾಟನೆ ಮಾಡಿ ಎಂದು ಒತ್ತಾಯಿಸಿದರು. ಒಟ್ಟಾರೆ ಕಾಂಗ್ರೆಸ್ ಸರಕಾರವು ಈ ರಾಜ್ಯವನ್ನು ಸಂಪೂರ್ಣ ಹದಗೆಡಿಸಿದೆ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳು ತಕ್ಷಣ ಕಾರ್ಯೋನ್ಮುಖವಾಗಲಿ. ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ರಾಜೀನಾಮೆ ಕೊಡಬೇಕೇ ಎಂದು ಅವರೇ ತೀರ್ಮಾನಿಸಲಿ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments