Homeಕರ್ನಾಟಕಜೀವದ ತೊಟ್ಟಿಲು ಭೂಮಿ ಬಂಜೆಯಾಗದಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜೀವದ ತೊಟ್ಟಿಲು ಭೂಮಿ ಬಂಜೆಯಾಗದಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಮಿ ಜೀವದ ತೊಟ್ಟಿಲು, ಇಂತಹ ಜೀವದ ತೊಟ್ಟಿಲನ್ನು ಬಂಜೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿನ ಬೆಳಗಾಂ ಶುಗರ್ಸ ಹತ್ತಿರ ಖಾಸಗಿ ಜಮೀನಿನಲ್ಲಿ ಜಿಲ್ಲಾಡಳಿತ, ಜಿಲ್ಲಾ‌ಪಂಚಾಯತ್ ಬೆಳಗಾವಿ, ಕೃಷಿ ಇಲಾಖೆ ಹಾಗೂ ಸಕ್ಕರೆ ಕಾರ್ಖಾನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

“ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ‌. ರಸಗೊಬ್ಬರ ಬಳಕೆಯಿಂದ ಹೆಚ್ವಿನ ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಾಗಿದೆ‌. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಪ್ರತಿಶತ 90 ಕೃಷಿ ಮೇಲೆಯೇ ಅವಲಂಬಿತವಾಗಿದೆ. ರೈತರಿಗೆ ಬೇಕಾದ ಸಹಾಯ ಮಾಡುವುದು ಸರಕಾರಗಳ ಜವಾಬ್ದಾರಿಯಾಗಿದೆ” ಎಂದರು.

“ನೀರಿನ ನಿರ್ವಹಣೆ ಕುರಿತು ಪ್ರತಿಯೊಬ್ಬರು ತಿಳಿದುಕೊಂಡು ನೀರನ್ನು ಮಿತವಾಗಿ ಬಳಸಬೇಕು. ಈ ಕುರಿತು‌ ಕೃಷಿ ಇಲಾಖೆ ಪ್ರತಿ ರೈತರ ಹತ್ತಿರ ಹೋಗಿ ಇಲಾಖೆಯಿಂದ ಪರಿಚಯಿಸಲಾಗುವ ಹೊಸ ತಳಿಗಳ ಕುರಿತು ಮಾಹಿತಿ ನೀಡಬೇಕು. ಕಳೆದ ಆಯವ್ಯಯಲ್ಲಿ ಘೋಷಿಸಿದಂತೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ” ಎಂದು ತಿಳಿಸಿದರು.

ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, “ರಾಜ್ಯದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಬೇಕು. ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದರ ಮೂಲಕ ಉತ್ತಮ ಆದಾಯ ಪಡೆಯಬೇಕೆನ್ನುವ ಉದ್ದೇಶದಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ, ನೀರಿನ ಸಮಗ್ರ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸಲಾಗಿದೆ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿ, “ರಾಜ್ಯ ಸರಕಾರವು ರೈತರು ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ದುಪ್ಪಟ್ಟು ಆದಾಯ ಪಡೆಯಲು ಅನುಕೂಲವಾಗುವಂತೆ ಸರಕಾರ ಅನೇಕ ಯೋಜನೆ ಹಾಗೂ ಸೌಲಭ್ಯಗಳನ್ನು ನೀಡುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲಾಗಿದೆ” ಎಂದು ತಿಳಿಸಿದರು.

ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, “ಕಾಲ ಬದಲಾದಂತೆ ರೈತರು ಕೂಡ ಕೃಷಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರದಿಂದ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದು ಕೊಂಡು ಉತ್ತಮ ಇಳುವರಿ ಹಾಗೂ ಆದಾಯ ಪಡೆದುಕೊಳ್ಳಬೇಕು. ರೈತರಿಗೆ ಇರುವಂತಹ ಸೌಲಭ್ಯ ಹಾಗೂ ಯೋಜನೆಗಳ‌ ಕುರಿತು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ‌ ಮಾಹಿತಿ ನೀಡುವ ಕಾರ್ಯ ಅಧಿಕಾರಿಗಳಿಂದ ಆಗಬೇಕು” ಎಂದರು.

“ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಅಂದಾಜು ಐದು ಕೋಟಿಗಿಂತ ಅಧಿಕ ಜನರು ಕಬ್ಬು ಬೆಳೆಯುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಯೋಗ್ಯ ದರ ದೊರಕದಿದ್ದರೆ ಅನಾನುಕೂಲವಾಗುತ್ತದೆ. ಆದ್ದರಿಂದ ಉತ್ತಮ ದರ ಒದಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ದೇಶದಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ಈ ಮೂರು ರಾಜ್ಯಗಳು ಅತೀ ಹೆಚ್ಚು ಸಕ್ಕರೆ ಉತ್ಪಾದಿಸುತ್ತಿವೆ. ಇಲ್ಲಿ ಉತ್ಪಾದಿಸಲಾಗುವ ಸಕ್ಕರೆಗೆ ಆಂತರಿಕ‌ ಮಾರುಕಟ್ಟೆಗಿಂತ ಹೊರ ರಾಷ್ಟ್ರಗಳಿಗೆ ಸಕ್ಕರೆ ರಫ್ತು ಮಾಡಿದಲ್ಲಿ ಉತ್ತಮ ಆದಾಯ ಪಡೆದುಕೊಳ್ಳಬಹುದಾಗಿದೆ” ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

ಇದೇ ಸಂದರ್ಭದಲ್ಲಿ ಮಣ್ಣು ಮತ್ತು ಆರೋಗ್ಯ ಚೀಟಿ , ಅಂಗಾಂಶ ಕೃಷಿಯಿಂದ ಉತ್ಪಾದಿಸಿದ ಕಬ್ಬಿನ ಸಸಿಗಳನ್ನು ವಿತರಿಸಿ,ಕಬ್ಬಿನ ರವದಿ ಕತ್ತರಿಸುವ (ಟ್ರ್ಯಾಷ್ ಕಟರ್), ಹೊದಿಕೆ ಯಂತ್ರದ (ಟ್ರ್ಯಾಷ್ ಮಲ್ಚರ್) ಹಾಗೂ ಕೃಷಿ ಭಾಗ್ಯ ಪಲಾನುಭವಿಗಳಿಗೆ ಕಾರ್ಯಾದೇಶ ವಿತರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments