ಆಧುನಿಕ ಭಾರತೀಯ ರಾಜಕಾರಣದ ’ಜೀವ ದ್ರವ್ಯ’ ಎಂಬುದು ಎಲ್ಲ ಕಾಲಕ್ಕೂ ಜನಸಮುದಾಯದ ಹಿತವೇ ಅಗಿರಬೇಕು ಎಂದು ಪ್ರತಿಪಾದಿಸಿದ, ಅದಕ್ಕಾಗಿ ಹೋರಾಡಿದ, ಜಗತ್ತೇ ಮೆಚ್ಚುವಂತೆ ಮೌಲಿಕವಾದ ತಾತ್ವಿಕತೆಯನ್ನು ಕಟ್ಟಿಕೊಟ್ಟ ವಾಮನ ರೂಪಿ ’ಡಾ. ರಾಮಮನೋಹರ ಲೋಹಿಯಾ’ ಅವರಿಗೂ ನಮ್ಮ ನಡುವೆ ತಲೆಬಾಗಿಲ ನೆತ್ತಿ ತಾಗುವಷ್ಟು ಎತ್ತರದ ಆಳು, ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಕ್ರಿಯಾಶೀಲ ಪತ್ರಕರ್ತರಾಗಿ ಇರುವ ಶಿವಣ್ಣ (ಶಿವಾನಂದ ತಗಡೂರು) ಅವರಿಗೂ ಎಲ್ಲಿಂದೆಲ್ಲಿಯ ಸಂಬಂಧ?
ಭಾರತೀಯ ರಾಷ್ಟ್ರೀಯವಾದಕ್ಕೆ ಘನತೆಯ ವ್ಯಾಖ್ಯಾನ ಕೊಟ್ಟವರು ಲೋಹಿಯಾ. ಅಸಾಧಾರಣ ಮಾನವಪ್ರೇಮಿಯಾದ ಲೋಹಿಯಾ ಅವರು ಸದಾ ಕಾಲ ಜನಸಮುದಾಯದ ಒಳಿತಿಗಾಗಿಯೇ ಚಿಂತಿಸಿದವರು,ದುಡಿದವರು. ಭಾರತದ ಚರಿತ್ರೆಯನ್ನು ಕಣ್ಣಾಡಿಸಿದರೆ ಲೋಹಿಯಾ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಮನುಷ್ಯ ತನ್ನ ಜೀವಿತಕಾಲದಲ್ಲಿ ತನ್ನಂತೆ ಇರುವ ಜನರ ಒಳಿತಿಗಾಗಿ,ಅವರ ಕಷ್ಟ ಕಾರ್ಪಣ್ಯಗಳಿಗೆ ಕಿಂಚಿತ್ತಾದರೂ ಪರಿಹಾರ ಹುಡುಕಿಕೊಡುವ ಪ್ರಯತ್ನದಲ್ಲಿರುವ ಯಾರೊಬ್ಬರಿಗೂ ಲೋಹಿಯಾ ಆದರ್ಶ ಮಾದರಿ.
ಇಂತಹ ಆದರ್ಶ ಮಾದರಿಯನ್ನು ಯಾರಾದರೂ ತಲುಪುವುದು ಅಷ್ಟು ಸುಲಭವಲ್ಲ ನಿಜ, ಅವರಿಗೆ ಯಾರನ್ನಾದರೂ ಹೋಲಿಸುವುದು ಅತಿ ಎನಿಸಿಬಿಡಬಹುದು. ಆದರೆ ಲೋಹಿಯಾ ಅವರ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನಾದರೂ ಹಾಕುವುದು ಈ ಹೊತ್ತಿನ ತುರ್ತು ಇದೆ. ಹಾಗೆ ನಡೆಯುವವರಲ್ಲಿ ಲೋಹಿಯಾ ಕಂಡರೆ ಅವರನ್ನು ನಮಿಸಬೇಕು.
ಶಿವಣ್ಣ (ಶಿವಾನಂದ ತಗಡೂರು) ರೈತ ಚಳವಳಿಯ ಪ್ರಭೆಯಿಂದ ಸಾಮಾಜಿಕ ಬದುಕನ್ನು ಕಟ್ಟಿಕೊಂಡವರು, ಎಲ್ಲ ಬಗೆಯ ಜನರ ಪರ ಚಳವಳಿಗಳ ಹಿಂಬಾಲಿಸಿ ನಡೆದವರು, ಪತ್ರಕರ್ತರಾಗಿ ಪತ್ರಿಕೋದ್ಯಮವು ಒಂದು ಚಳವಳಿ ಎಂದೇ ಭಾವಿಸಿಕೊಂಡು ವೃತ್ತಿಪರತೆ ಕಾಯ್ದುಕೊಂಡ ಇವರಿಗೆ ತನ್ನ ಕ್ಷೇತ್ರದ ಸಹದ್ಯೋಗಿಗಳ ಒಳಿತಿಗೆ ಸ್ಪಂದಿಸಲು ಸಿಕ್ಕ ಅವಕಾಶವೆಂದರೆ ಅದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎನ್ನುವ ರಾಜ್ಯದ ಉದ್ದಗಲಕ್ಕೂ ಹಬ್ಬಿದ ಬಯಲು.
ಶಿವಣ್ಣನದ್ದು ’ಮಾನವೀಯ ಸಿದ್ಧಾಂತ’ದ ಪಂಥ. ಅವರನ್ನು ಯಾವುದಾದರೂ ಒಂದು ಪಂಥದ ಗೂಟಕ್ಕೆ ಕಟ್ಟಲು ಸಾಧ್ಯವಿಲ್ಲ. ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಸಹನಾಶೀಲ ಧೋರಣೆ. ಅದುವೆ ಸೇವೆಗೆ, ಸಾಧನೆಗೆ ರುಜುಮಾರ್ಗ ಎಂದು ಬಲವಾಗಿ ನಂಬಿದವರು. ಸುದ್ದಿಮನೆಗಳಲ್ಲಿ ದುಡಿಯುತ್ತಿರುವ ಕಾರ್ಯನಿರತ ಪತ್ರಕರ್ತರ ಹಿತಕ್ಕಾಗಿ ತಮ್ಮ ಮಿತಿಯಲ್ಲಿ ದುಡಿಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಣ್ಣನಿಗೆ ಅವರಿಗೆ ” ಲೋಹಿಯಾ” ಹೆಸರಿನಲ್ಲಿ ಪ್ರಶಸ್ತಿಯೊಂದು ಅರಸಿ ಬಂದಿರುವುದು ಅವರ ನಿಸ್ಪೃಹ ಸೇವೆಯ ಸಂವೇದನಾಶೀಲ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ ಎನ್ನಬಹುದು.
ಶಿವಣ್ಣ (ಶಿವಾನಂದ ತಗಡೂರು)ನಿಗೆ ”ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್” ಈ ವರ್ಷದ ’ಲೋಹಿಯಾ ಪ್ರಶಸ್ತಿ’ ಯನ್ನು ಕೊಡ ಮಾಡುತ್ತಿದೆ. ಇದೊಂದು ಮೌಲಿಕ ಪ್ರಶಸ್ತಿ. ಇದರಿಂದಾಗಿ ಶಿವಾನಂದ ತಗಡೂರು ಅವರ ಶ್ರಮಕ್ಕೊಂದು ಮೌಲ್ಯದ ಮೆರಗು ಹೊಳೆದಂತಾಗಿದೆ.
ಈ ದೇಶ ಕಂಡ ಅಪ್ರತಿಮ ಜನಹೋರಾಟಗಾರ, ಚಿಂತಕ, ತಾತ್ವಿಕ ರಾಜಕಾರಣದ ಪ್ರವರ್ತಕರೇ ಆದ “ಡಾ. ರಾಮನೋಹರ ಲೋಹಿಯಾ” ನಮ್ಮ ಪತ್ರಕರ್ತ ಶಿವಣ್ಣನನ್ನು ಹುಡುಕಿಕೊಂಡು ಬಂದಿದ್ದಾರೆ ಪ್ರಶಸ್ತಿ ಎಂಬ ನೆಪದ ರೂಪದಲ್ಲಿ.
‘ಲೋಹಿಯಾ’ ಮತ್ತು ‘ಶಿವಣ್ಣ’ ಇಬ್ಬರಿಗೂ ಅಭಿನಂದನೆಗಳು.
ಬರೆಹ: ಎನ್ ರವಿಕುಮಾರ್ ಟೆಲೆಕ್ಸ್


