ಬಿಜೆಪಿ ವತಿಯಿಂದ ನವೆಂಬರ್ 26ರಿಂದ ಒಂದು ವಾರದ ಕಾಲ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ‘ಭೀಮ ನಡೆ’ ಕಾರ್ಯಕ್ರಮವನ್ನು ಡಿ.6ವರೆಗೆ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಒಟ್ಟು 10 ದಿನಗಳಲ್ಲಿ 7 ದಿನಗಳ ಕಾಲ ಭೀಮ ಸ್ಮರಣೆ ಜಾಗೃತಿ ಮಾಡಲಾಗುವುದು. ಇವತ್ತು ಈ ಸಂಬಂಧ ಸಭೆ ನಡೆಸಲಾಗಿದೆ. ರಾಜ್ಯಾದ್ಯಂತ ಇದು ನಡೆಯಲಿದ್ದು, ಇವತ್ತು ಚಾಲನೆ ಕೊಡಲಾಗಿದೆ” ಎಂದರು.
“ಕಾಂಗ್ರೆಸ್ ಪಕ್ಷವು ಡಾ. ಅಂಬೇಡ್ಕರರಿಗೆ ಬಗೆದ ದ್ರೋಹ, ಬಾಬಾಸಾಹೇಬ ಅಂಬೇಡ್ಕರರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಅವರಿಗೆ ಭಾರತರತ್ನ ಕೊಡದೇ ಇದ್ದವರು ಯಾರು? ಅವರು ಮೃತರಾದಾಗ ಅವರ ಸಮಾಧಿ ಮಾಡಲು ಸ್ಥಳ ಕೊಡದೇ ಇದ್ದವರು ಯಾರೆಂಬ ವಿಚಾರವನ್ನು ಜನರಿಗೆ ಮುಟ್ಟಿಸುತ್ತೇವೆ. ಅದಲ್ಲದೇ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಸಂವಿಧಾನ ದಿನದ ಘೋಷಣೆ ಮಾಡಿದರು. ಡಾ. ಅಂಬೇಡ್ಕರರ ಪುಣ್ಯಸ್ಥಳಗಳನ್ನು ಜನರಿಗೆ ವೀಕ್ಷಣೆ ಮಾಡುವ ಸೌಕರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ- ಇದನ್ನೂ ಜನರಿಗೆ ತಿಳಿಸುತ್ತೇವೆ ಎಂದರು. ಇದರ ಉದ್ಘಾಟನೆಯನ್ನು ನಾನು, ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಸಿ.ಟಿ.ರವಿ ಅವರು ನೆರವೇರಿಸಿದ್ದಾಗಿ” ಹೇಳಿದರು.
“ಕಾಂಗ್ರೆಸ್ ಸರಕಾರವು ಗ್ರೇಟರ್ ಬೆಂಗಳೂರಿನಲ್ಲಿ ಗ್ರೇಟರ್ ಕೆಲಸಗಳನ್ನು ಮಾಡುತ್ತಿದೆ. ಇವತ್ತು ಕಸ ಗುಡಿಸಲು ಯಂತ್ರ ತೆಗೆದುಕೊಳ್ಳುತ್ತಿದ್ದು, ಅದರಲ್ಲೂ ಲೂಟಿ ತಂತ್ರ ಮಾಡಿದ್ದಾರೆ ಎಂದು ಟೀಕಿಸಿದರು. ತೆರಿಗೆದಾರರ 613 ಕೋಟಿ ಹಣವನ್ನು ಕಸ ಗುಡಿಸುವ ಲಾರಿಗಳಿಗೆ ಬಾಡಿಗೆ ಮೊತ್ತದಲ್ಲಿ ನೀಡಲಾಗುತ್ತದೆ. ನಿರ್ವಹಣಾ ವೆಚ್ಚ 115 ಕೋಟಿ. ಚಾಲಕನಿಗೆ 30 ಸಾವಿರ, ಸಹಾಯಕನಿಗೆ 20 ಸಾವಿರ ವೇತನ ನೀಡಿ, 1.5 ಲಕ್ಷ ಡೀಸೆಲ್ ವೆಚ್ಚ, ವಾಹನ ನಿರ್ವಹಣೆಗೆ 3 ಲಕ್ಷ- ಇವೆಲ್ಲ ಸೇರಿದರೂ 5 ಲಕ್ಷವಾಗುತ್ತದೆ. ಇವರು ಕೊಟ್ಟ ಹಣದಲ್ಲಿ ಇಷ್ಟೂ ಲಾರಿಗಳನ್ನು ಖರೀದಿಸಿ ಇನ್ನೂ ಹಣ ಉಳಿಯುತ್ತದೆ. ನಾವೇ ಖರೀದಿಸಿದರೆ 308 ಕೋಟಿಯಲ್ಲೇ ಮುಗಿಯುತ್ತದೆ ಎಂದು ವಿವರಿಸಿದರು. ಅಲ್ಲದೇ ವಾಹನ ಸ್ವಂತದ್ದಾಗಲಿದೆ” ಎಂದು ಹೇಳಿದರು.
“ತೆರಿಗೆದಾರರ ಹಣ ಲೂಟಿಗೆ ಕಾಂಗ್ರೆಸ್ಸಿನವರು ಯಾವ ರೀತಿ ಸ್ಕೀಂ ಹಾಕಿದ್ದಾರೆಂದು ಇದರಿಂದ ಅರ್ಥವಾಗುತ್ತದೆ. ಇದು ಲೂಟಿ ಹೊಡೆಯುವ ಸ್ಕೀಂ ಎಂದು ಟೀಕಿಸಿದರು. ಖರೀದಿ ಮಾಡುವಂತೆ ತಜ್ಞರ ಸಮಿತಿ ತಿಳಿಸಿದೆ. ಆ ವರದಿಯನ್ನು ಮೂಲೆಗೆ ಬಿಸಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕಾಗಿ ಸುತ್ತೋಲೆ ಹೊರಡಿಸಿದ್ದಾರೆ” ಎಂದರು.


