Homeಕರ್ನಾಟಕಹೆಚ್‌ ಡಿ ರೇವಣ್ಣ | ಮಹಿಳೆಯ ಘನತೆಗೆ ಚ್ಯುತಿ ಆರೋಪವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ

ಹೆಚ್‌ ಡಿ ರೇವಣ್ಣ | ಮಹಿಳೆಯ ಘನತೆಗೆ ಚ್ಯುತಿ ಆರೋಪವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ

ಮನೆ ಕೆಲಸದ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಆರೋಪವನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿರುವ ಹೈಕೋರ್ಟ್, ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಆರೋಪದಲ್ಲಿ ಸಂಜ್ಞೆ ಪರಿಗಣಿಸಿದ್ದ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ.

ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಅಲ್ಲದೇ, ಪ್ರಕರಣ ಸಂಬಂಧ 42ನೇ ಎಸಿಜೆಎಂ ನ್ಯಾಯಾಲಯ ಅರ್ಜಿದಾರ ರೇವಣ್ಣ ವಿರುದ್ಧ ಐಪಿಸಿ 354 (ಮಹಿಳೆಯ ಘನತೆಗೆ ಚ್ಯುತಿ) ಅಡಿ ಸಂಜ್ಞೆ ಪರಿಗಣಿಸಿರುವುದನ್ನು ರದ್ದುಪಡಿಸಲಾಗಿದೆ. ವಿಳಂಬವನ್ನು ಮೀರಿ ಐಪಿಸಿ 354ಎ (ಲೈಂಗಿಕ ದೌರ್ಜನ್ಯ) ಅಡಿ ಸೂಕ್ತ ಆದೇಶ ಮಾಡಲು ಪರಿಗಣಿಸುವಂತೆ ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ದೂರಿನಲ್ಲಿರುವ ಆರೋಪಗಳು ಐಪಿಸಿ ಸೆಕ್ಷನ್ 354ಎ ಅಡಿ ಬರುತ್ತವೆ. ಐಪಿಸಿ ಸೆಕ್ಷನ್ 354 ಇಲ್ಲಿ ಅನ್ವಯಿಸಲ್ಲ. ಹೀಗಾಗಿ ಸಂತ್ರಸ್ತೆಯ ಘನತೆಗೆ ಹಾನಿ ಮಾಡುವ ಉದ್ದೇಶ ತೋರುವುದಿಲ್ಲ. ಇದು ಲೈಂಗಿಕ ದೌರ್ಜನ್ಯವಾಗುತ್ತದೆ. ಅಗತ್ಯವಿದ್ದರೆ ನಮ್ಮ ಆದೇಶವನ್ನು ಪ್ರಶ್ನಿಸಬಹುದು ಎಂದು ಪ್ರಾಸಿಕ್ಯೂಷನ್ ಪರ ವಕೀಲರಿಗೆ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 2024ರ ಏಪ್ರಿಲ್ 28 ರಂದು ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್ ಪ್ರಕರಣ 354A, 354D, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ರೇವಣ್ಣ ಅವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಲ್ಲದೇ ತಮ್ಮ ಮಗಳಿಗೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ನೀಡುತ್ತಿದ್ದು, ಮಗಳು ಹೆದರಿ ನಂಬರ್ ಬ್ಲಾಕ್ ಮಾಡಿಕೊಂಡಿದ್ದಳು. ಇದರಿಂದ ತಾನು ಕೆಲಸ ತೊರೆದಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments