114ವರ್ಷ ಜೀವಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ 114 ಸಸಿ ನೆಟ್ಟು ಪೋಷಿಸಲಾಗುವುದು ಮತ್ತು ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ ಮಹಾನ್ ಪರಿಸರ ಪ್ರೇಮಿಗೆ ಅಂತಿಮ ನಮನ ಸಲ್ಲಿಸಿದ ತರುವಾಯ ಮಾತನಾಡಿದ ಅವರು, ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೆ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ ಎಂದರು.
ಇಲಾಖೆ ಅವರನ್ನು ಪರಿಸರ ರಾಯಭಾರಿಯಾಗಿ ಪುರಸ್ಕರಿಸಿತ್ತು. ಅಜ್ಜಿಯ ಪ್ರೇರಣೆಯಿಂದ ನೂರಾರು ಜನರು ತಮ್ಮ ಕೈಲಾದಷ್ಟು ಸಸಿ ನೆಟ್ಟು ಪೋಷಿಸುತ್ತಿದ್ದಾರೆ. ಲಕ್ಷಾಂತರ ಪರಿಸರ ಪ್ರೇಮಿಗಳಿಗೆ ಪ್ರೇರಣೆಯಾಗಿದ್ದ ತಿಮ್ಮಕ್ಕ ಅವರ ನಿಧನದಿಂದ ರಾಜ್ಯ ನಿಷ್ಠಾವಂತ ಪರಿಸರ ಕಾಳಜಿಯ ಮಹಾಜೀವಿಯನ್ನು ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ಮಾತನ್ನು ಕೃತಿಯಲ್ಲಿ ತೋರಿಸಿದರು: ಪರಮೇಶ್ವರ್
ಇಡೀ ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಎಲ್ಲರ ಅಚ್ಚುಮೆಚ್ಚಿನ ತಾಯಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ನೋವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಸಾಲುಮರದ ತಿಮ್ಮಕ್ಕನವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ಅಪಾರವಾದ ನಷ್ಟವಾಗಿದೆ. ತಿಮ್ಮಕ್ಕನವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದಂತವರು. ಬಹುಶಃ ಯಾರು ಕೂಡ ನಡೆಯದ ದಾರಿಯನ್ನು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು, ಕೃತಿಯಲ್ಲಿ ಮಾಡಿ ತೋರಿಸಿದವರು.
ಅತ್ಯಂತ ಬಡ ಕುಟುಂಬದಿಂದ ಬಂದಂತ ಸಾಲುಮರದ ತಿಮ್ಮಕ್ಕ, ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಅವೇ ತನ್ನ ಮಕ್ಕಳು ಎಂದು ಸಾಕಿದರು.
ಜಗತ್ತಿಗೆ, ಪರಿಸರ ಕ್ಷೇತ್ರಕ್ಕೆ ಆದರ್ಶವನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಬ್ರೆಜಿಲ್ನಲ್ಲಿ ನಡೆದ ಅತಿದೊಡ್ಡ ಸಮಾವೇಶದಲ್ಲಿ, ಜಗತ್ತಿನಲ್ಲಿ ಪರಿಸರ ಹಾಳಾಗುತ್ತದೆ. ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳಾದವು. ಇದ್ಯಾವುದರ ಅರಿವಿಲ್ಲದೆ ಪರಿಸರ ಸಂರಕ್ಷಣೆಯ ಸಂದೇಶವನ್ನು ತಿಮ್ಮಕ್ಕನವರು ಜಗತ್ತಿಗೆ ಕೊಟ್ಟಿದ್ದಾರೆ.
ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಸಾಕುಮಗ ಉಮೇಶ್ ಆ ತಾಯಿಯನ್ನು ನಿಜವಾಗಿ ಸಾಕಿದ್ದಾನೆ. ಸರ್ಕಾರ ಎಲ್ಲ ರೀತಿಯ ಗೌರವಗಳನ್ನು ಸಮರ್ಪಣೆ ಮಾಡಲಿದೆ ಎಂದು ಹೇಳಿದರು.


