Homeಕರ್ನಾಟಕಕೈದಿಗಳಿಗೆ ರಾಜಾತಿಥ್ಯ, ತನಿಖೆಗೆ ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್

ಕೈದಿಗಳಿಗೆ ರಾಜಾತಿಥ್ಯ, ತನಿಖೆಗೆ ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರಕರಣವನ್ನು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ತಿಳಿಸಿದರು.

ಪ್ರಕರಣ ಕುರಿತು ಪರಮೇಶ್ವರ್‌ ಅವರು ಸೋಮವಾರ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು

“ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಒಂದು ತಿಂಗಳಲ್ಲಿ ತನಿಖೆ ನಡೆಸಿ ಸಮಗ್ರ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ” ಎಂದರು.

“ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿವೆ. ಪ್ರಸಾರವಾಗಿರುವ ವಿಡಿಯೋ ಕುರಿತು ಪರಿಶೀಲಿಸಿದ್ದೇವೆ” ಎಂದು ಹೇಳಿದರು.

“ಮುಖ್ಯವಾದ ಕೆಲವು ವಿಡಿಯೋಗಳು 2023ರಲ್ಲಿ ನಡೆದಿವೆ. ಒಂದೆರಡು ವಿಡಿಯೋಗಳು 3-4 ತಿಂಗಳ ಹಿಂದೆ ನಡೆದಿವೆ. ಈ ಎಲ್ಲ ವಿಡಿಯೋಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಲೋಪಗಳ ಕುರಿತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆ‌ರ್.ಹಿತೇಂದ್ರ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ” ಎಂದು ತಿಳಿಸಿದರು.

“ಸಮಿತಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಪಾಟೀಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾದ ಅಮರನಾಥ ರೆಡ್ಡಿ ಮತ್ತು ಸಿ.ಬಿ. ರಿಷ್ಯಂತ್ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ ಪ್ರಮುಖ ಕಾರಾಗೃಹಗಳು ಇರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಮಿತಿಯ ಸಹ-ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಹೇಳಿದರು.

“ಬೆಂಗಳೂರು ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮ್ಯಾಗೇರಿ ಮತ್ತು ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ಮುಂದೆ ಪರಪ್ಪನ ಅಗ್ರಹಾರ ಜೈಲಿನ ಉಸ್ತುವಾರಿಯನ್ನು ಐಪಿಎಸ್ ಅಧಿಕಾರಿಯೊಬ್ಬರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲಾಗಿದೆ. ಜೈಲಿನಲ್ಲಿರುವ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಸಂಪರ್ಕಿಸುವ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು” ಎಂದು ಪರಮೇಶ್ವರ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments