ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.
ನಿನ್ನೆ ಸಂಭವಿಸಿದ ಹೃದಯಾಘಾದಿಂದ ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ವೈದ್ಯರ ನಿರಂತರ ಚಿಕಿತ್ಸೆ ನಂತರವೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ರಾಜು ತಾಳಿಕೋಟಿಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.
ಧಾರವಾಡ ರಂಗಾಯಣ ನಿರ್ದೇಶಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಹಾಸ್ಯ ನಟನಾಗಿ, ರಂಗಕರ್ಮಿಯಾಗಿ ಅವರು ಗುರುತಿಸಿಕೊಂಡಿದ್ದರು. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಮೃತರಾಗಿದ್ದಾರೆ.
ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ಸಲುವಾಗಿ ರಾಜು ತಾಳಿಕೋಟೆ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಭಾನುವಾರ ರಾತ್ರಿ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದರೂ ಕೂಡ ಅವರು ಬದುಕಿ ಉಳಿಯಲಿಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತಿಳಿಸಿದ್ದಾರೆ.
ರಂಗಭೂಮಿಯ ‘ಖಾಸ್ಗತೇಶ್ವರ’ ಮಾಲೀಕ
ರಾಜು ತಾಳಿಕೋಟಿಯವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ ಎಂದಾಗಿತ್ತು. ಅವರು ಕೇವಲ ನಟನಾಗಿರದೆ, ತಾಳಿಕೋಟಿಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಅವರ ಜೀವನದ ಬಹುಪಾಲು ಸಮಯವನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸುವುದರಲ್ಲಿಯೇ ಕಳೆದಿದ್ದರು.