ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂ ಸ್ವಾಧೀನ ಮಾಡುತ್ತಿರುವುದು ಅಕ್ರಮವಾಗಿದೆ. ಇದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ರೈತರ ಪ್ರತಿಭಟನೆಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು, “ಗ್ರೇಟರ್ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ 9,600 ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದೆ. ಈ ಪೈಕಿ 6,500 ಎಕರೆ ಕೃಷಿಭೂಮಿ ಇದೆ. ಇಲ್ಲಿ 10 ಲಕ್ಷಕ್ಕೂ ಅಧಿಕ ತೆಂಗು ಹಾಗೂ ಮಾವಿನ ಮರಗಳಿವೆ. ಪ್ರತಿ ದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಕೆಎಂಎಫ್‌ಗೆ ತಲುಪುತ್ತಿದೆ. 3 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಮಿಕರು ಕೃಷಿಯನ್ನು ನಂಬಿಕೊಂಡಿದ್ದಾರೆ. ಇಷ್ಟು ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೈಟುಗಳನ್ನು ನೀಡಲಾಗುತ್ತಿದೆ” ಎಂದರು.
“ಹೌಸಿಂಗ್ ಬೋರ್ಡ್‌ನಿಂದ 560 ಎಕರೆ ಜಮೀನು ಸ್ವಾಧೀನಕ್ಕೆ ಪಡೆದು ಸೈಟುಗಳನ್ನು ನಿರ್ಮಿಸಿದೆ. ಆದರೂ ಇಲ್ಲಿ ಯಾರೂ ಮನೆಗಳನ್ನು ನಿರ್ಮಿಸಿಲ್ಲ. ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳಲ್ಲೇ ಖಾಲಿ ಇದೆ. ಇಷ್ಟು ಖಾಲಿ ಇರುವಾಗ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಅದು ರೈತರಿಗೆ ಮಾಡುವ ವಂಚನೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ವಾಧೀನ ಬೇಡವೆಂದು ರೈತರಿಗೆ ಜಮೀನು ಬಿಟ್ಟಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕುತಂತ್ರ ಮಾಡಿ ಜಮೀನು ಲೂಟಿ ಮಾಡಿ ರಿಯಲ್ ಎಸ್ಟೇಟ್‌ನಿಂದ ಹಣ ಹೊಡೆಯಲು ಪ್ಲಾನ್ ಮಾಡಿದೆ. ರಾಮನಗರದಲ್ಲಿ ಸೈಟು ಬೇಕೆಂದು ಯಾರು ಕೇಳಿದ್ದಾರೆ? ಮಾಡಿರುವ ಸೈಟುಗಳೇ ಖಾಲಿ ಇದೆ. ಇದು ಅಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಿದ್ದೇವೆ. ಕೂಡಲೇ ಸರ್ಕಾರ ಈ ಸ್ವಾಧೀನ ಕ್ರಮವನ್ನು ಕೈ ಬಿಡಬೇಕು. ಸರ್ಕಾರದಿಂದ ಯಾರಾದರೂ ಬಂದು ರೈತರ ಅಹವಾಲು ಆಲಿಸಬೇಕಿತ್ತು. ರೈತರನ್ನು ಸಮಾಧಾನ ಮಾಡಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಬೇಡ” ಎಂದರು.
“ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಿನೋಟಿಫಿಕೇಶನ್ ಮಾಡದೆಯೇ ಹಾಗೆಯೇ ಬಿಟ್ಟುಬಿಡಬೇಕು. ಯಾವುದೇ ಸವಲತ್ತು ಬೇಡವೆಂದು ರೈತರು ಹೇಳಿದ್ದಾರೆ. ಬಹುತೇಕ ರೈತರು ಹೀಗೆಯೇ ಇರಲಿ ಎಂದು ಹೇಳಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರ ಮಾತಿಗೆ ಬೆಲೆ ನೀಡಬೇಕು. ಮುಂದೆ ನಮ್ಮ ಸರ್ಕಾರ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಈ ಕುರಿತು ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಇದನ್ನು ಯಾವ ಝೋನ್ ಮಾಡಬೇಕೆಂದು ಸರ್ಕಾರ ರೈತರೊಂದಿಗೆ ಚರ್ಚಿಸಲಿ” ಎಂದು ಒತ್ತಾಯಿಸಿದರು.