ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧು ಎಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ನಾಲ್ಕು ವಾರದೊಳಗೆ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ.
2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಅವರು ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
ಕಳೆದ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ಮಂಗಳವಾರ ಅಂತಿಮ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಆರೋಪ ಮಾಡಿದ್ದರು. ಹೀಗಾಗಿ ಕೋರ್ಟ್ ಮತ್ತೊಮ್ಮೆ ಎಣಿಕೆಯನ್ನೂ ಮಾಡುವಂತೆ ಸೂಚನೆ ನೀಡಿದೆ.
ಶಾಸಕರಾಗಿ ಕೆವೈ ನಂಜೇಗೌಡ ಅವರ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ಅಸಿಂಧು ಎಂದು ನೀಡಿದ್ದ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿದೆ. ಅಷ್ಟರಲ್ಲಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದಿದ್ದರೆ ಶಾಸಕ ಸ್ಥಾನ ಅಸಿಂಧುವಾಗಲಿದೆ. ಮರು ಮತ ಎಣಿಕೆ ಯಥಾ ಪ್ರಕಾರ ನಡೆಯಲಿದೆ. ಹೈಕೋರ್ಟ್ ಆದೇಶಕ್ಕೆ ತಡೆ ತಂದರೆ ಶಾಸಕ ಸ್ಥಾನಕ್ಕೆ ಸಮಸ್ಯೆಯಾಗುವುದಿಲ್ಲ.