ಉತ್ತರಾಖಂಡದ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ಹಠಾತ್ ಪ್ರವಾಹ ಉಂಟಾಗಿದೆ. ಭಾರಿ ಮಳೆ, ಪ್ರವಾಹದಿಂದ ರಸ್ತೆಗಳು, ಮನೆಗಳಿಗೆ ಹಾನಿಯಾಗಿದ್ದು, ಹಲವು ಜನ ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ಹಿಮಾಲಯದ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಕಡೆ ಮೇಘಸ್ಫೋಟ ಸಂಭವಿಸಿದೆ. ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ಸಾಗಿದೆ” ಎಂದಿದ್ದಾರೆ.
ಡೆಹ್ರಾಡೂನ್ ನ ತಪೋವನ್ ಹಾಗೂ ಸಹಸ್ರಧಾರಾ ಹಾಗೂ ಅದೇ ಪ್ರಾಂತ್ಯದಲ್ಲಿರುವ ಐಟಿ ಪಾರ್ಕ್ ನಲ್ಲಿ ಭಾರೀ ನೀರು ನುಗ್ಗಿದೆ. ಪ್ರವಾಹಕ್ಕೆ ಸಿಲುಕಿ ಇಬ್ಬರು ನಾಗರಿಕರು ಕೊಚ್ಚಿ ಹೋಗಿದ್ದು ಅವರಿನ್ನೂ ಪತ್ತೆಯಾಗಿಲ್ಲ.
25 ರಿಂದ 30 ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸರ್ಕಾರಿ ಆಸ್ತಿಪಾಸ್ತಿಗಳು ಸಹ ಹಾನಿಗೀಡಾಗಿದ್ದು, ಅನೇಕ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿ ನಿರ್ವಹಣೆಗೆ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿಗಳ ನೀರಿನ ಮಟ್ಟ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಪ್ರವಾಹದ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಪ್ರವಾಹ ಪೀಡಿತ ಪ್ರದೇಶಕ್ಕೆ ತನ್ನ ಸಿಬ್ಬಂದಿಯನ್ನು ಕಳುಹಿಸಿ ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ. ಪ್ರವಾಹದಿಂದಾಗಿ ಜನವಸತಿ ಪ್ರದೇಶಗಳಲ್ಲಿ ಕೆಲವು ಮನೆಗಳಿಗೆ ಹಾಗೂ ಅಂಗಡಿಗಳಿಗೆ ಹಾನಿಯಾಗಿದೆ. ಸಹಸ್ರಧಾರದಲ್ಲೇ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಧಮಿ ಅವರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾತನಾಡಿ, “ಡೆಹ್ರಾಡೂನ್ನಲ್ಲಿರುವ ಸಹಸ್ರಧಾರ ಮತ್ತು ಮಾಲ್ ದೇವತಾ, ಮತ್ತು ಮಸ್ಸೂರಿಯಲ್ಲಿ ಹಾನಿಯಾಗಿರುವ ಬಗ್ಗೆ ವರದಿ ಬಂದಿದೆ. ಡೆಹ್ರಾಡೂನ್ನಲ್ಲಿ ಇಬ್ಬರಿಂದ ಮೂವರು ಕಣ್ಮರೆಯಾಗಿದ್ದು, ಮಸ್ಸೂರಿಯಲ್ಲಿ ಒಂದು ಸಾವಿನ ಕುರಿತು ದೃಢವಾಗಬೇಕದೆ” ಎಂದು ಹೇಳಿದ್ದಾರೆ.