ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಹೈಕೋರ್ಟ್ ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ಪ್ರತಾಪ್ ಸಿಂಹ, ಟಿ. ಗಿರೀಶ್ ಕುಮಾರ್ ಹಾಗೂ ಹೆಚ್. ಎಸ್. ಗೌರವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಾಧೀಶರಾದ ಸಿ. ಎಂ. ಜೋಶಿ ಅವರಿದ್ದ ನ್ಯಾಯಪೀಠ, ಅರ್ಜಿಗಳನ್ನು ವಜಾಗೊಳಿಸಿ ಆದೇಶ ಪ್ರಕಟಿಸಿತು.
ಇದರಿಂದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಹೆಸರು ಆಯ್ಕೆಯಾದಾಗಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಪ್ರತಾಪ್ ಸಿಂಹ ಅವರಿಗೆತೀವ್ರ ಹಿನ್ನಡೆಯದಂತಾಗಿದೆ.
ಸರ್ಕಾರದ ನಿರ್ಧಾರದಿಂದ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ ಎಂದು ಹೇಳಿರುವ ಹೈಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಅರ್ಜಿದಾರರಿಗೆ ದಂಡ ವಿಧಿಸುವಂತೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಾಡಿದರು. ಆದರೆ ಇದಕ್ಕೆ ಪೀಠ ನಿರಾಕರಿಸಿತು.