Homeಕರ್ನಾಟಕಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಅವರು ಒಂದು ಸಿದ್ಧಾಂತ: ಕೆ.ವಿ.ಪ್ರಭಾಕರ್

ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಅವರು ಒಂದು ಸಿದ್ಧಾಂತ: ಕೆ.ವಿ.ಪ್ರಭಾಕರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರೇ ಒಂದು ಸಿದ್ಧಾಂತ. ಬೆವರಿನ‌ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಬೆಳಗಾವಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.‌

“ಪತ್ರಕರ್ತನಾಗಿ ಎರಡು ಕಣ್ಣುಗಳಿಂದ ಸಮಾಜವನ್ನು ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತದೆ ಎನ್ನುವ ಸಾಮಾಜಿಕ ಎಚ್ಚರವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ. ಒಂದು ಬಲಿಷ್ಠವಾದ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ನಾನು ಸಿದ್ದರಾಮಯ್ಯ ಅವರಿಂದ ಕಲಿತೆ” ಎಂದರು.

“ವಿಧಾನಸೌಧದಲ್ಲಿ ಬೇರೆ ಬೇರೆ ಜನ ಸಮುದಾಯಗಳ, ದುಡಿಯುವ ವರ್ಗಗಳ ಸಭೆಗಳು ನಡೆಯುವಾಗ ಅವರೆಲ್ಲರ ಬಾಯಲ್ಲಿ ಬರುವ ಒಂದು ಮಾತು ಪದೇ ಪದೆ ನನ್ನ ಕಿವಿಗೆ ಬೀಳುತ್ತದೆ. “ಸಾರ್, ನಮಗೆ ನ್ಯಾಯ ಸಿಕ್ಕರೆ ನಿಮ್ಮ ಅವಧಿಯಲ್ಲೇ ಸಿಗಬೇಕು ಸರ್. ಹಿಂದಿನವರೂ ಮಾಡಿಲ್ಲ, ಮುಂದೆ ಬರುವವರೂ ಮಾಡುವುದೂ ಕಷ್ಟ ಸರ್”. ಈ ಮಾತು ನನ್ನನ್ನು ಸದಾ ಎಚ್ಚರದಲ್ಲಿ ಇರುವಂತೆ ಮಾಡಿ ನನ್ನ ಕರ್ತವ್ಯ ಪ್ರಜ್ಞೆಯನ್ನು ರೂಪಿಸಿದೆ” ಎಂದು ಹೇಳಿದರು.

“ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದಿಲೀಪ್ ಕುರಂದವಾಡೆ ಇಬ್ಬರೂ ಅಸಾಧ್ಯ ಸಂಘಟಕರು ಮತ್ತು ಅಷ್ಟೇ ಬದ್ಧತೆಯುಳ್ಳವರು. ನಿಮ್ಮಲ್ಲರ ಹಾರೈಕೆ ಮತ್ತು ಬೆಂಬಲದಲ್ಲಿ ನಾನು ಇಲ್ಲಿಯವರೆಗೂ ಹೆಜ್ಜೆ ಇಟ್ಟಿದ್ದೇನೆ. ನಡೆಯಬೇಕಾಗಿರುವ ಹಾದಿ ಬಹಳ ಇದೆ. ಆದರೆ, ನನಗೆ ಒದಗಿ ಬಂದಿರುವ ಈ ಅವಕಾಶದಲ್ಲಿ ನಾನು ಪತ್ರಕರ್ತರ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು ಎನ್ನುವ ಖಚಿತ ನಿರ್ಧಾರ ಮಾಡಿಯೇ ಕೆಲಸ ಮಾಡುತ್ತಿದ್ದೇನೆ” ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದೀಪಕ್ ಕುರಂದವಾಡೆ, KUWJ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ.ಭೀಮಶಿ ಎಲ್. ಜಾರಕಿಹೊಳಿ, ಸಂಘದ ಮುಖಂಡರಾದ ಮದನ್ ಗೌಡ ಸೇರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments