Homeಕರ್ನಾಟಕವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ

ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ

ವಿಷ್ಣು ಅಭಿಮಾನಿಗಳ ದಶಕಗಳ ಬೇಡಿಕೆ ಫಲಿಸಿದ್ದು ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇನ್ನು ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ಇಂದಿನ ಸಂಪುಟ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಕಳುಹಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು.

1972ರಲ್ಲಿ ವಂಶವೃಕ್ಷ ಚಿತ್ರದಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರು ಅದೇ ವರ್ಷ ಬಿಡುಗಡೆಯಾಗಿದ್ದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದು ಮೊದಲ ಪ್ರಯತ್ನದಲ್ಲೇ ವಿಷ್ಣುವರ್ಧನ್ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯವು 2005ರಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತ್ತು.

ಕನ್ನಡದ ಹಿರಿಯ ಚಲನಚಿತ್ರ ನಟಿಯರಲ್ಲಿ ಬಿ. ಸರೋಜಾದೇವಿ ಸಹ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿಯಾಗಿ ಗುರುತಿಸಿಕೊಂಡರು. ಅವರು ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಅಭಿನಯ ಸರಸ್ವತಿ’ ಮತ್ತು ತಮಿಳಿನಲ್ಲಿ ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ.

ಸರೋಜಾದೇವಿ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರ 2008ರ ಜೀವಮಾನ ಸಾಧನೆ ಪ್ರಶಸ್ತಿ ನೀಡಿತ್ತು. ಇನ್ನು 1992ರಲ್ಲಿ ‘ಪದ್ಮಭೂಷಣ ಪ್ರಶಸ್ತಿ’ ಮತ್ತು 1969ರಲ್ಲಿ ಪದ್ಮಶ್ರೀ ಪಡೆದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments